ಹೆರ್ಮೊಸಿಲ್ಲೊ (ಮೆಕ್ಸಿಕೊ):ಆರ್ಚರಿ ವಿಶ್ವಕಪ್ ಫೈನಲ್ 2023ರಲ್ಲಿ ಭಾರತದ ಆಟಗಾರ ಪ್ರಥಮೇಶ್ ಬೆಳ್ಳಿ ಪದಕ ಗೆದ್ದಿದ್ದಾರೆ. ಶನಿವಾರ ನಡೆದ ವಿಶ್ವಕಪ್ ಪಂದ್ಯದ ಪುರುಷರ ವಿಭಾಗದ ಆರ್ಚರಿ ಕಾಂಪೌಂಡ್ ಸ್ಪರ್ಧೆಯಲ್ಲಿ ಪ್ರಥಮೇಶ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುವಲ್ಲಿ ಎಡವಿದರು. ಇದರಿಂದ ಫೈನಲ್‌ನಲ್ಲಿ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು. ಇದು ಪ್ರಥಮೇಶ್ ಅವರ ಚೊಚ್ಚಲ ವಿಶ್ವಕಪ್ ಪಂದ್ಯವಾಗಿದೆ.
ಡೆನ್ಮಾರ್ಕ್‌ನ ಮಥಿಯಾಸ್ ಫುಲ್ಲರ್ಟನ್ ವಿರುದ್ಧ ರೋಚಕ ಹಣಾಹಣಿಯಲ್ಲಿ ಐದು ಸೆಟ್‌ಗಳ ನಂತರ 148-148 ಅಂಕದಿಂದ ಟೈನೊಂದಿಗೆ ಮುಕ್ತಾಯಗೊಂಡಿತು. ಇದಾದ ನಂತರ ನಡೆದ ಟೈ ಬ್ರೇಕರ್ನಲ್ಲೂ ಇಬ್ಬರು 10 ಅಂಕವನ್ನು ಗಳಿಸಿದರು. ಆದರೆ ಫುಲ್ಲರ್ಟನ್ ಅವರು ವೃತ್ತದ ಮಧ್ಯ ಕೇಂದ್ರವನ್ನು ಛೇದಿಸಿದ್ದರಿಂದ ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಕ್ವಾರ್ಟರ್‌ಫೈನಲ್‌ನಲ್ಲಿ ಜಾವ್ಕರ್ ವಿಶ್ವದ ನಂ.5 ಇಟಾಲಿಯನ್ ಆಟಗಾರ ಮಿಗುಯೆಲ್ ಬೆಸೆರಾ ವಿರುದ್ಧ 149-141 ಅಂಕಗಳ ಭರ್ಜರಿ ಜಯ ದಾಖಲಿಸಿದರು. ನಂತರ ಅವರು ವಿಶ್ವ ನಂ. 1 ನೆದರ್ಲೆಂಡ್ಸ್‌ನ ಮೈಕ್ ಷ್ಲೋಸರ್ ವಿರುದ್ಧ ಪರಿಪೂರ್ಣ 150 ರನ್ ಗಳಿಸಿ, ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿದರು. ಜಾವ್ಕರ್ ವಿಶ್ವದ ನಂ 1 ಮತ್ತು ಹಾಲಿ ಚಾಂಪಿಯನ್ ಮೈಕ್ ಷ್ಲೋಸರ್ ಅವರನ್ನು ನಾಲ್ಕು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಸೋಲಿಸಿದ್ದರು. ಹ್ಯುಂಡೈ ಆರ್ಚರಿ ವಿಶ್ವಕಪ್ ಪ್ರವಾಸದಲ್ಲಿ ಭಾರತೀಯ ಆಟಗಾರ ಪ್ರಥಮೇಶ್ ತನ್ನ ಮೊದಲ ಸೀಸನ್ ಆಡಿದ್ದರು. ಇದರಲ್ಲಿ ಶಾಂಘೈ ಸ್ಟೇಜ್ 2 ನಲ್ಲಿ 33 ನೇ ಶ್ರೇಯಾಂಕದೊಂದಿಗೆ ಚಿನ್ನ ಗೆದ್ದಿದ್ದರು.