ಲಿಮೇರಿಕ್ (ಐರ್ಲೆಂಡ್): ಐರ್ಲೆಂಡ್ನಲ್ಲಿ ನಡೆದ ಯೂತ್ ವರ್ಲ್ಡ್ ಚಾಂಪಿಯನ್‌ಶಿಪ್ ಟೂರ್ನಿಯ ಆರ್ಚರಿ ಪಂದ್ಯದ ಪುರುಷರ ವಿಭಾಗದಲ್ಲಿ ಭಾರತದ ಪಾರ್ಥ್ ಸಾಲುಂಖೆ ಚಿನ್ನದ ಪದಕ ಗೆದ್ದು, ದೇಶದ ಮೊದಲ ಯುವ ವಿಶ್ವ ಚಾಂಪಿಯನ್ ಆರ್ಚರಿಯಾಗಿದ್ದಾರೆ.
ಮಹಾರಾಷ್ಟ್ರದ ಸತಾರಾದ 19 ವರ್ಷದ ಯುವಕ ಪಾರ್ಥ್ ಅವರು ಭಾನುವಾರ ಇಲ್ಲಿ ನಡೆದ 21 ವರ್ಷದೊಳಗಿನವರ ಪುರುಷರ ರಿಕರ್ವ್ ವೈಯಕ್ತಿಕ ಫೈನಲ್‌ನಲ್ಲಿ ಕೊರಿಯಾದ ಆಟಗಾರ ಸಾಂಗ್ ಇಂಜುನ್ರನ್ನು ಮಣಿಸಿದರು. ಶ್ರೇಯಾಂಕದ ಸುತ್ತಿನಲ್ಲಿ ಅಗ್ರ ಸ್ಥಾನದಲ್ಲಿದ್ದ ಸಾಲುಂಖೆ ಏಳನೇ ಶ್ರೇಯಾಂಕದ ಸಾಂಗ್ ಇಂಜುನ್ ವಿರುದ್ಧ 7-3 (26-26, 25-28, 28-26, 29-26, 28-26) ಅಂತರದಿಂದ ಮೇಲುಗೈ ಸಾಧಿಸಿ ಚಿನ್ನಕ್ಕೆ ಮುತ್ತಿಕ್ಕಿದರು.
21 ವರ್ಷದೊಳಗಿನ ಮಹಿಳೆಯರ ರಿಕರ್ವ್ ವೈಯಕ್ತಿಕ ವಿಭಾಗದಲ್ಲಿ ಭಾರತದ ಭಾಜಾ ಕೌರ್ ಚೀನಾದ ತೈಪೆಯ ಸು ಹ್ಸಿನ್-ಯು ಅವರನ್ನು 7-1 (28-25, 27-27, 29-25, 30-26) ಅಂತರದಿಂದ ಮಣಿಸಿ ಕಂಚಿನ ಪದಕ ಮುಡಿಗೇರಿಸಿಕೊಂಡರು.
ಈ ಟೂರ್ನಿಯಲ್ಲಿ ಭಾರತವು ಆರು ಚಿನ್ನ, ಒಂದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳೊಂದಿಗೆ ಒಟ್ಟಾರೆ 11 ಪದಕಗಳನ್ನು ಜಯಿಸಿ ಪದಕಗಳ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದು ಟೂರ್ನಿ ಅಭಿಯಾನವನ್ನು ಮುಕ್ತಾಯಗೊಳಿಸಿತು. ಒಟ್ಟಾರೆ ಅಂಕಪಟ್ಟಿಯಲ್ಲಿ ಕೊರಿಯಾ ಆರು ಚಿನ್ನ ಮತ್ತು ನಾಲ್ಕು ಬೆಳ್ಳಿ ಪದಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಭಾರತ ಎರಡನೇ ಸ್ಥಾನ ಪಡೆಯಿತು.