ಬಲ್ಗೇರಿಯಾ: ಅಂಡರ್-20 ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ ಕುಸ್ತಿಪಟು ಅಂತಿಮ್ ಪಂಗಾಲ್ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಸ್ವರ್ಣ ಪದಕ ಗೆದ್ದಿರುವ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್ಶಿಪ್ನ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಅಂತಿಮ್ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ಅಲ್ಟನ್ ಶಗಾಯೆವಾ ವಿರುದ್ಧ ನಡೆದ ಸೆಣಸಾಟದಲ್ಲಿ 8-0 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕೇವಲ 17 ವರ್ಷದ ಅಂತಿಮ್ ಪಂಗಾಲ್ ವಿಶ್ವಕುಸ್ತಿ ಚಾಂಪಿಯನ್ಶಿಪ್ನಲ್ಲಿ ಹೊಸದೊಂದು ದಾಖಲೆ ನಿರ್ಮಿಸಿರುವ ಭಾರತದ ಮೊದಲ ಮಹಿಳಾ ಕುಸ್ತಿಪಟುವಾಗಿದ್ದಾರೆ. ಕಳೆದ 34 ವರ್ಷಗಳಿಂದ ನಡೆಯುತ್ತಿರುವ ಈ ಚಾಂಪಿಯನ್ಶಿಪ್ನಲ್ಲಿ ಭಾರತ ಚಿನ್ನ ಗೆದ್ದಿರಲಿಲ್ಲ. ಈ ಹಿಂದೆ 2021ರ ಕೆಡೆಟ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದಿದ್ದ ಅಂತಿಮ್ ಪಂಗಾಲ್, 2022ರ ಅಂಡರ್-23 ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದಿದ್ದರು. ಮೂಲತಃ ಹರಿಯಾದ ಹಿಸಾರ್ನವರಾಗಿರುವ ಅಂತಿಮ್, 2004ರಲ್ಲಿ ಜನಿಸಿದ್ದಾರೆ. ಇವರಿಗೆ ಮೂವರು ಸಹೋದರಿಯರಿದ್ದಾರೆ.
ಇದಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ ಜರ್ಮನಿಯ ಎದುರಾಳಿ ವಿರುದ್ಧ 11-0, ಕ್ವಾರ್ಟರ್ಫೈನಲ್ನಲ್ಲಿ ಜಪಾನ್ ಕುಸ್ತಿಪಟು ವಿರುದ್ಧ ಜಯಭೇರಿ ಬಾರಿಸಿದ್ದ ಅಂತಿಮ್, ಸೆಮೀಸ್ನಲ್ಲಿ ಉಕ್ರೇನ್ ಮಹಿಳಾ ಕುಸ್ತಿಪಟು ವಿರುದ್ಧ ಗೆಲುವಿನ ನಗೆ ಬೀರಿ, ಫೈನಲ್ಗೆ ಲಗ್ಗೆ ಹಾಕಿದ್ದರು. ಪ್ರಶಸ್ತಿ ಸುತ್ತಿನಲ್ಲೂ ಗಮನಾರ್ಹ ಪ್ರದರ್ಶನ ನೀಡಿ, ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಉಳಿದಂತೆ 62 ಕೆಜಿ ವಿಭಾಗದಲ್ಲಿ ಸೋನಂ, 65 ಕೆಜಿ ವಿಭಾಗದಲ್ಲಿ ಪ್ರಿಯಾಂಕಾ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇನ್ನೂ 57 ಕೆಜಿ ವಿಭಾಗದಲ್ಲಿ ಸಿಟೊ ಹಾಗೂ 72 ಕೆಜಿ ವಿಭಾಗದಲ್ಲಿ ರಿತಿಕಾ ಕಂಚಿನ ಪದಕ ಗೆದ್ದಿದ್ದಾರೆ.