ಒಸ್ಲೋ(ನಾರ್ವೆ): ಭಾರತದ ಯುವ ಮಹಿಳಾ ಕುಸ್ತಿಪಟು ಅನ್ಶು ಮಲಿಕ್ ಗುರುವಾರ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಗೆ ಅನ್ಶು ಮಲಿಕ್ ಪಾತ್ರರಾಗಿದ್ದಾರೆ.
ನಾರ್ವೆಯಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ ಫೈನಲ್ನಲ್ಲಿ 57 ಕೆಜಿ ವಿಭಾಗದಲ್ಲಿ ಓಲಿಂಪಿಕ್ ಪದಕ ವಿಜೇತೆ ಹೆಲೆನ್ ಮರೋಲಿಸ್ ವಿರುದ್ಧ ಅನ್ಶು ಮಲಿಕ್ 4-1 ಅಂತರದಿಂದ ಸೋಲನುಭವಿಸಿದರು. ಈ ಮೂಲಕ ಬೆಳ್ಳಿ ಪದಕಕ್ಕೆ ಮಲಿಕ್ ಮುತ್ತಿಕ್ಕಿ ದಾಖಲೆ ಬರೆದರು.
ಅಮೆರಿಕದ ಕುಸ್ತಿ ಪಟು ಹೆಲೆನ್ ಮರೋಲಿಸ್ ಅದ್ಭುತ ಪ್ರದರ್ಶನದ ಮೂಲಕ ಚಿನ್ನದ ಪದಕ ಜಯಿಸಿದರು. ಬುಧಬಾರ ನಡೆದ ಸೆಮಿಫೈನಲ್ನಲ್ಲಿ ಯುರೋಪಿಯನ್ ಚಾಂಪಿಯನ್ ಉಕ್ರೇನ್ನ ಸೊಲೊಮಿಯಾ ವಿನ್ನಿಕ್ ಅವರನ್ನು 11-0 ಅಂತರದಲ್ಲಿ ಅನ್ಶು ಮಲಿಕ್ ಮಣಿಸಿ ಫೈನಲ್ ಪ್ರವೇಶಿಸಿದ್ದರು. ಆ ಮೂಲಕ ಫೈನಲ್ಗೇರಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಇತಿಹಾಸ ರಚಿಸಿದ್ದರು.
ಏಷ್ಯನ್ ಚಾಂಪಿಯನ್ ಆಗಿರುವ 19 ವರ್ಷ ವಯಸ್ಸಿನ ಅನ್ಶು 2016 ರಿಂದ ಲಕ್ನೋ ರಾಷ್ಟ್ರೀಯ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ ನಡೆದ ಓಲಿಂಪಿಕ್ನಲ್ಲಿ ಅನ್ಶು ಮೊದಲ ಬಾರಿಗೆ ಭಾಗವಹಿಸಿದ್ದರು. ಈ ಮೊದಲು ಎರಡು ಏಷಿಯನ್ ಚಾಂಪಿಯನ್ಶಿಪ್ನಲ್ಲಿ ಅನ್ಶು ಮಲಿಕ್ ಚಿನ್ನ ಹಾಗೂ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡಿದ್ದರು.
(ಇತಿಹಾಸ ಬರೆದ ಕುಸ್ತಿಪಟು ಅನ್ಶು ಮಲಿಕ್.. ವಿಶ್ವಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಿದ ಮೊದಲ ಭಾರತೀಯ ಮಹಿಳೆ)