ನವದೆಹಲಿ:ಇತ್ತೀಚಿನ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶೀತಲ್ ದೇವಿ ಅಸಾಧಾರಣ ಪ್ರತಿಭೆಯಾಗಿ ಹೊರಹಮ್ಮಿದ್ದಾರೆ. ಎರಡು ಕೈಗಳಿಲ್ಲದ ಜಮ್ಮು ಮತ್ತು ಕಾಶ್ಮೀರದ ಬಾಲೆ ಇಡೀ ಕ್ರೀಡಾ ಜಗತ್ತಿನಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. 16 ವರ್ಷದ ಈ ಅಪರೂಪದ ಪಟು ಬಿಲ್ಲುಗಾರಿಕೆಯಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದು ವಿಶ್ವವನ್ನೇ ಬೆರಗುಗೊಳಿಸಿದ್ದಾರೆ.
ಹ್ಯಾಂಗ್‌ಝೌನಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಎರಡು ಕೈಗಳಿಲ್ಲದ ಶೀತಲ್ ದೇವಿ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಬಂಗಾರ, ಬೆಳ್ಳಿ ಸಮೇತ ಮೂರು ಪದಕಗಳಿಗೆ ಮುತ್ತಿಕ್ಕಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್ ಹಾಗೂ ಕಾಂಪೌಂಡ್ ಮಿಶ್ರ ವಿಭಾಗದಲ್ಲಿ ಎರಡು ಚಿನ್ನ ಮತ್ತು ಮಹಿಳೆಯರ ಡಬಲ್ಸ್‌ನಲ್ಲಿ ಶೀತಲ್ ದೇವಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ತೋಳ್ಬಲವಿಲ್ಲದೆಯೇ ಕಾಲಿನಲ್ಲಿ ಬಿಲ್ಲನ್ನು ಹಿಡಿದು ಪದಕಗಳಿಗೆ ಗುರಿಯಿಟ್ಟು ಬಿಲ್ಲುಗಾರ್ತಿ ಅಬ್ಬರಿಸಿದ್ದಾರೆ. ಈ ಮೂಲಕ ಒಂದೇ ಕ್ರೀಡಾಕೂಟದಲ್ಲಿ ಎರಡು ಸ್ವರ್ಣ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಎಂಬ ಶ್ರೇಷ್ಠ ಹೆಗ್ಗಳಿಕೆಗೆ ಕಣಿವೆ ನಾಡಿನ ಕುವರಿ ಪಾತ್ರರಾಗಿದ್ದಾರೆ.
ಜೀವನಕ್ಕೆ ಚೈತನ್ಯ ತುಂಬಿದ ಸೇನಾ ಶಿಬಿರ:ಜಮ್ಮು ಮತ್ತು ಕಾಶ್ಮೀರದ ಶೀತಲ್ ದೇವಿಯ ಜೀವನವೇ ಸ್ಪೂರ್ತಿದಾಯಕವಾಗಿದೆ. ಬಡ ಕುಟುಂಬದಲ್ಲಿ ಜನಿಸಿದ ಇವರು ಹುಟ್ಟಿನಿಂದಲೇ ತೋಳುಗಳನ್ನು ಕಳೆದುಕೊಂಡಿದ್ದರು. ಫೋಕೊಮೆಲಿಯಾ ಎಂಬ ಕಾಯಿಲೆಯಿಂದಾಗಿ ಎರಡೂ ಕೈಗಳು ಬೆಳೆಯಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಕುಗ್ಗದೇ ತನ್ನ ಕಾಲುಗಳನ್ನೇ ಅಸ್ತ್ರಗಳನ್ನಾಗಿ ಮಾಡಿಕೊಂಡರು.
ಮಕ್ಕಳೊಂದಿಗೆ ಆಡಿ, ನಲಿಯುತ್ತಲೇ ಕಾಲುಗಳಿಂದಲೇ ಕೆಲಸ ಮಾಡಲು ಕಲಿತರು. ಆದರೆ, ಶೀತಲ್ ದೇವಿಗೆ ಭಾರತೀಯ ಸೇನೆ ಆಯೋಜಿಸಿದ್ದ ಕ್ರೀಡಾ ಶಿಬಿರವು ಆಕೆಯ ಬದುಕಿಗೆ ತಿರುವು ನೀಡಿತು. ಸೇನಾ ಕ್ರೀಡಾ ಶಿಬಿರದಲ್ಲಿ ಭಾಗವಹಿಸಿದ್ದು ಈಕೆಗೆ ತಿರುವು ಮಾತ್ರವಲ್ಲದೇ ಜೀವನಕ್ಕೆ ಚೈತನ್ಯ ಕೂಡ ತುಂಬಿತು. ಆಟಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಶೀತಲ್ ದೇವಿಗೆ ಬಿಲ್ಲುಗಾರಿಕೆ ಇಷ್ಟವಾಗಿತ್ತು. ಕಾಲುಗಳನ್ನೇ ತನ್ನ ಕೈಗಳಂತೆ ಬಳಸಿ ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದಾರೆ.