ವಾಷಿಂಗ್ಟನ್:ಅಮೆರಿಕಾದ ಬ್ಯಾಸ್ಕೆಟ್ ಬಾಲ್ ಆಟಗಾರ ಹಾಗೂ ಮಾಜಿ ಎನ್ಬಿಎ ಸ್ಟಾರ್ ಕೋಬ್ ಬ್ರ್ಯಾಂಟ್ ಹಾಗೂ ಆತನ 13 ವರ್ಷದ ಮಗಳು ಗಿಯಾನ್ನ ಸೇರಿದಂತೆ 9 ಮಂದಿ ಹೆಲಿಕಾಫ್ಟರ್ ದುರಂತದಲ್ಲಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದಿದೆ.
ಎನ್ಬಿಎ ಇತಿಹಾಸದಲ್ಲಿ ಅತ್ಯುತ್ತಮ ಆಟಗಾರ ಎಂದು ಹೆಸರಾಗಿದ್ದ ಕೋಬ್ ಬ್ರ್ಯಾಂಡ್ ತಮ್ಮ ಖಾಸಗಿ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾಪ್ಟರ್ ಪತನಗೊಂಡ ಪರಿಣಾಮ 41 ವರ್ಷದ ಕೋಬ್ ಬ್ರ್ಯಾಂಟ್, ಆತನ 13 ವರ್ಷಗ ಮಗಳು ಗಿಯಾನ್ನ ಹಾಗೂ ಅವರ ಜೊತೆಗಿದ್ದ 7 ಮಂದಿ ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಒಬ್ಬರು ಕಾಲೇಜೊಂದರ ಬ್ಯಾಸ್ಕೆಟ್ ಬಾಲ್ ಕೋಚ್ ಎಂದು ತಿಳಿದುಬಂದಿದೆ.
ಲಾಸ್ ಏಂಜಲೀಸ್ನ ವಾಯುವ್ಯಕ್ಕೆ 30 ಮೈಲಿ ದೂರದಲ್ಲಿನ ಕ್ಯಾಲಬಾಸಸ್ ಮೇಲೆ ಹಾರುತ್ತಿದ್ದ ವೇಳೆ ಹೆಲಿಕಾಪ್ಟರ್ ಪತನಗೊಂಡಿದೆ. ಈ ದುರಂತದಲ್ಲಿ ಮೃತಪಟ್ಟಿರುವ ಇತರೆ ವ್ಯಕ್ತಿಗಳು ಯಾರೆಂದು ಇದುವರೆಗೂ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಹೈಸ್ಕೂಲ್ನಲ್ಲಿ ಓದುತ್ತಿರುವಾಗಲೇ ಎನ್ಬಿಎಗೆ ಪದಾರ್ಪಣೆ ಮಾಡಿದ್ದ ಬ್ರ್ಯಾಂಟ್ ತಮ್ಮ ವೃತ್ತಿ ಜೀವನದಲ್ಲಿ 5 ಬಾರಿ ಚಾಂಪಿಯನ್ ತಂಡದ ಭಾಗವಾಗಿದ್ದರು. 2008 ಮತ್ತು 2012ರ ಒಲಿಂಪಿಕ್ಸ್ನಲ್ಲಿ ಅಮೆರಿಕಾ ತಂಡವನ್ನು ಪ್ರತಿನಿಧಿಸಿ ಚಿನ್ನದ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.
ವಿಶ್ವವಿಖ್ಯಾತ ಕ್ರೀಡಾಪಟುವಾಗಿದ್ದ ಕೋಬ್ ಬ್ರ್ಯಾಂಟ್ ಅವರ ಸಾವಿಗೆ ವಿಶ್ವದ ಹಲವು ಕ್ರೀಡಾಪಟುಗಳು ಕಂಬನಿ ಮಿಡಿದಿದ್ದಾರೆ. ಭಾರತ ತಂಡದ ಓಪನರ್ ರೋಹಿತ್ ಶರ್ಮಾ, ಫುಟ್ಬಾಲ್ ಸ್ಟಾರ್ ಕ್ರಿಶ್ಚಿಯಾನ್ ರೊನಾಲ್ಟೊ, wwe ಸ್ಟಾರ್ ಡ್ವೇನ್ ಜಾನ್ಸನ್ ಸೇರಿದಂತೆ ಕೋಟ್ಯಾಂತರ ಮಂದಿ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.