ಉಡುಪಿ (ಕರ್ನಾಟಕ): 2018ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದು ದೇಶಕ್ಕೆ ಮೊದಲ ಪದಕ ತಂದಿದ್ದ ಕುಂದಾಪುರ ತಾಲೂಕಿನ ಕುಗ್ರಾಮ ಚಿತ್ತೂರು ಗ್ರಾಮದ ವೇಟ್ ಲಿಫ್ಟರ್ ಗುರುರಾಜ್ ಅವರೀಗ ಇಂಗ್ಲೆಂಡ್ನಲ್ಲಿ ನಡೆದ ಕಾಮನ್ವೆಲ್ತ್-2022 ಕ್ರೀಡಾಕೂಟದಲ್ಲೂ ಕಂಚಿನ ಪದಕಕ್ಕೆ ಕೊರಳೊಡ್ಡಿ ಮತ್ತೊಂದು ಸಾಧನೆ ಮಾಡಿದ್ದಾರೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತೀಯ ವೇಟ್ ಲಿಫ್ಟರ್ಗಳ ತಂಡ ಪಾಲ್ಗೊಂಡಿದ್ದು ಪ್ರತಿಷ್ಠಿತ ಕ್ರೀಡಾ ಹಬ್ಬದಲ್ಲಿ ಗುರುರಾಜ್ ಕಂಚು ಪದಕ ಗೆಲ್ಲವ ಮೂಲಕ ಉಡುಪಿ ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಕಳೆದ ಬಾರಿ ಪುರುಷರ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಇವರು ಒಟ್ಟು 249 ಕೆಜಿ ಭಾರ ಎತ್ತಿ ಬೆಳ್ಳಿಯ ಪದಕ ಗೆದ್ದಿದ್ದರು. ಈ ಬಾರಿ 61 ಕೆಜಿ ವಿಭಾಗದಲ್ಲಿ ಗುರುರಾಜ್ ಸ್ಪರ್ಧಿಸಿದ್ದು, ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕುಟುಂಬಸ್ಥರು ಹೇಳಿದ್ದಿಷ್ಟು: ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶವಾದ ಚಿತ್ತೂರು ಎಂಬಲ್ಲಿ ಗುರುರಾಜ್ ಕಡು ಬಡತನದಲ್ಲಿ ಬೆಳೆದು ಈಗ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಬೆಳೆದಿದ್ದಾರೆ. ಈವರೆಗೆ ಗುರುರಾಜ್ ಕಠಿಣ ಸವಾಲುಗಳನ್ನು ಎದುರಿಸಿದ್ದಾರೆ. ಅವರ ಆಸಕ್ತಿ ಹಾಗೂ ಶ್ರದ್ಧೆಯಿಂದ ಸಾಧನೆ ಸಾಧ್ಯವಾಗಿದೆ ಎಂದು ಕುಟುಂಬಸ್ಥರು ಹೇಳುತ್ತಾರೆ.
ಸಾಧನೆಯ ಹಾದಿ: 2016ರಲ್ಲಿ 56 ಕೆಜಿ ವಿಭಾಗದಲ್ಲಿ ಮಲೇಶಿಯಾದಲ್ಲಿ ಕಾಮನ್ವೆಲ್ತ್ ಚಾಂಪಿಯನ್ ಶಿಪ್, 2017ರಲ್ಲಿ ಆಸ್ಟ್ರೇಲಿಯಾದಲ್ಲಿ ಚಾಂಪಿಯನ್ ಶಿಪ್, 2016ರಲ್ಲಿ ದಕ್ಷಿಣ ಏಷ್ಯಾ ಗೇಮ್ಸ್ನಲ್ಲಿ ಚಿನ್ನ, ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಚಿನ್ನ, ಬೆಳ್ಳಿ ಪದಕ, ಕಳೆದ ವರ್ಷ 61 ಕೆಜಿ ವಿಭಾಗದಲ್ಲಿ ಉಜ್ಬೇಕಿಸ್ತಾನದಲ್ಲಿ ಕಾಮನ್ವೆಲ್ತ್ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿ ಪಡೆದಿದ್ದು, 2018ರಲ್ಲಿ ರಾಜ್ಯ ಸರ್ಕಾರ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.