ಬರ್ಮಿಂಗ್ಹ್ಯಾಮ್( ಇಂಗ್ಲೆಂಡ್):ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನ ಫೈನಲ್‌ನಲ್ಲಿ ಲಕ್ಷ್ಯಸೇನ್ ವಿಶ್ವ ನಂಬರ್ ಒನ್ ಆಟಗಾರ ಅಕ್ಸೆಲ್ಸೆನ್ ಎದರು ಸೋಲನ್ನಪ್ಪಿಕೊಂಡು ರನ್ನರ್ಅಪ್ ಆಗಿ ಹೊರಹೊಮ್ಮಿದ್ದಾರೆ. ಭಾರಿ ನಿರೀಕ್ಷೆಗಳ ನಡುವೆ ಫೈನಲ್‌ನಲ್ಲಿ ಕಣಕ್ಕೆ ಇಳಿದ ಲಕ್ಷ್ಯ ಸೇನ್ ಬಲಿಷ್ಠ ಎದುರಾಳಿ ಜತೆಗಿನ ಹೋರಾಟದಲ್ಲಿ ಸೋಲು ಕಂಡಿದ್ದಾರೆ.
ಓದಿ:21 ದಿನಗಳ ನಂತರ ತಾಯ್ನಾಡಿಗೆ ಬಂದ ನವೀನ್ ಪಾರ್ಥಿವ ಶರೀರ..ಸಿಎಂಗೆ ಧನ್ಯವಾದ ಸಮರ್ಪಿಸಿದ ಕುಟುಂಬ
ಇಬ್ಬರ ನಡುವೆ ನಡೆದ ಪಂದ್ಯದಲ್ಲಿ ಲಕ್ಷ್ಯಸೇನ್ 10-21, 15-21 ರಲ್ಲಿ ವಿಶ್ವದ ನಂಬರ್ ಒನ್ ಒಲಿಂಪಿಕ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ (ಡೆನ್ಮಾರ್ಕ್) ವಿರುದ್ಧ ನಿರಾಶೆ ಅನುಭವಿಸಿದರು. ಅಂತಿಮ ಹೋರಾಟದಲ್ಲಿ ಲಕ್ಷ್ಯಸೇನ್ಗೆ ಈ ಹಿಂದೆ ನೀಡಿದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇಡೀ ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದಿದ್ದ ಅಕ್ಸೆಲ್ಸನ್ ಒಂದೇ ಒಂದು ಪಂದ್ಯದಲ್ಲಿ ಸೋಲನುಭವಿಸದೇ ಪ್ರಶಸ್ತಿ ಗೆದ್ದುಕೊಂಡರು. ಇನ್ನು ರನ್ನರ್ ಅಪ್ ಆಗಿ ಹೊರಹೊಮ್ಮಿದ ಲಕ್ಷ್ಯಸೇನ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು.
ಮಹಿಳೆಯರಿಗೂ ಸೋಲು!:ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಜಪಾನ್‌ನ ಅಕಾನೆ ಯಮಗುಚಿ ಪ್ರಶಸ್ತಿ ಗೆದ್ದಿದ್ದಾರೆ. ಫೈನಲ್‌ನಲ್ಲಿ ಅವರು 21-15, 21-15 ರಲ್ಲಿ ಆನ್ ಕ್ಸಿಯಾಂಗ್ರನ್ನು (ದಕ್ಷಿಣ ಕೊರಿಯಾ) ಸೋಲಿಸಿದರು. ಮತ್ತೊಂದೆಡೆ ಮಹಿಳೆಯರ ಡಬಲ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಸೆಮೀಸ್‌ಗೆ ತಲುಪಿದ್ದ ಗಾಯತ್ರಿ ಗೋಪಿಚಂದ್ ಪುಲ್ಲೇಲ ಮತ್ತು ತ್ರೇಸಾ ಜಾಲಿ ಜೋಡಿ ಫೈನಲ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಸೆಮಿಸ್‌ನಲ್ಲಿ ಈ ಜೋಡಿ 17-21, 16-21ರಲ್ಲಿ ಜಾಂಗ್ ಕ್ಸಿಯಾನ್-ಜಾಂಗ್ ಯು (ಚೀನಾ) ಎದುರು ಸೋತರು.
ಲಕ್ಷ್ಯ ಸೇನ್ ದಾಖಲೆ:ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ಪ್ರವೇಶಿಸುವ ಮೂಲಕ ಲಕ್ಷ್ಯಸೇನ್ ಹೊಸ ದಾಖಲೆ ಬರೆದಿದ್ದಾರೆ. ಈ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಹಾಕಿರುವ ಐದನೇ ಭಾರತೀಯ ಶಟ್ಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 20 ವರ್ಷದ ಲಕ್ಷ್ಯ ಸೇನ್, ಪ್ರಕಾಶ್ ಪಡುಕೋಣೆ ಮತ್ತು ಪುಲ್ಲೇಲ ಗೋಪಿಚಂದ್ ನಂತರ ಫೈನಲ್ ತಲುಪಿರುವ ಮೂರನೇ ಪುರುಷ ಆಟಗಾರನಾಗಿದ್ದಾರೆ. ಪ್ರಕಾಶ್ ಪಡುಕೋಣೆ ಮತ್ತು ಗೋಪಿಚಂದ್ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಭಾರತೀಯರಾಗಿದ್ದರೆ, ಸೈನಾ ನೆಹ್ವಾಲ್ 2015 ರಲ್ಲಿ ಫೈನಲ್ ತಲುಪಿದ್ದರು. 2001ರ ಬಳಿಕ ಫೈನಲ್ ಪ್ರವೇಶ ಪಡೆದುಕೊಂಡಿರುವ ಮೊದಲ ಭಾರತೀಯ ಪುರುಷ ಆಟಗಾರನಾಗಿ ಲಕ್ಷ್ಯಸೇನ್ ಹೊರಹೊಮ್ಮಿದ್ದಾರೆ.
ಗಣ್ಯರ ಶ್ಲಾಘನೆ:ಆಲ್ ಇಂಗ್ಲೆಂಡ್ ಓಪನ್ನಲ್ಲಿ ರನ್ನರ್ ಆಗಿ ಹೊರಹೊಮ್ಮಿರುವ ಲಕ್ಷ್ಯಸೇನ್ಗೆ ಪ್ರಧಾನಿ ಸೇರಿದಂತೆ ಇತರ ಗಣ್ಯರು ಶ್ಲಾಘಿಸಿದ್ದಾರೆ.
ನಿಮ್ಮ ಬಗ್ಗೆ ಹೆಮ್ಮೆ ಇದೆ ಲಕ್ಷ್ಯಸೇನ್. ನೀವು ಆಟದಲ್ಲಿ ಛಲ ಮತ್ತು ದೃಢತೆಯನ್ನು ತೋರಿಸಿದ್ದೀರಿ. ನೀವು ಉತ್ಸಾಹಭರಿತ ಹೋರಾಟವನ್ನು ಮಾಡಿದ್ದೀರಿ. ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು. ನೀವು ಯಶಸ್ಸಿನ ಎತ್ತರಗಳನ್ನು ಏರುತ್ತಲೇ ಇರುತ್ತೀರಿ ಎಂದು ನನಗೆ ವಿಶ್ವಾಸವಿದೆ ಅಂತಾ ಮೋದಿ ಟ್ವೀಟ್ ಮಾಡಿದ್ದಾರೆ.
ನೀವು ಯಾರಿಗೂ ಎರಡನೆಯವರಲ್ಲ ಲಕ್ಷ್ಯಸೇನ್. ನೀವು ಶತಕೋಟಿ ಹೃದಯಗಳನ್ನು ಗೆದ್ದಿದ್ದೀರಿ. ಅದ್ಭುತ ಪ್ರದರ್ಶನಕ್ಕಾಗಿ ಅಭಿನಂದನೆಗಳು. ನೀವು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭಾಶಯಗಳು ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಸೇನ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.