ಭೋಪಾಲ್(ಮಧ್ಯಪ್ರದೇಶ): ನಟ ಆರ್ ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್ ಉತ್ತಮ ಈಜುಪಟು. ಭೋಪಾಲ್ನಲ್ಲಿ ನಡೆದ 'ಖೇಲೋ ಇಂಡಿಯಾ ಯೂತ್ ಗೇಮ್ಸ್'ನಲ್ಲಿ ವೇದಾಂತ್ 200 ಮೀಟರ್ ಫ್ರೀಸ್ಟೈಲ್ ನಲ್ಲಿ ಚಿನ್ನದ ಪದಕ ಗೆದಿದ್ದಾರೆ. ಈ ಸಂದರ್ಭದಲ್ಲಿ ವೇದಾಂತ್ 'ಈಟಿವಿ ಭಾರತ'ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ.
'ಖೇಲೋ ಇಂಡಿಯಾ ನನ್ನ ಮೆಚ್ಚಿನ ಸ್ಪರ್ಧೆಗಳಲ್ಲಿ ಒಂದಾಗಿದೆ. ಇಲ್ಲಿ ಸ್ಪರ್ಧೆಯು ತುಂಬಾ ಕಷ್ಟಕರವಾಗಿದೆ. ನಾನು ನನ್ನ ಪ್ರಯತ್ನ ಮಾಡುತ್ತಿದ್ದೇನೆ. ಕಳೆದ 6 ವರ್ಷಗಳಿಂದ ಈಜಿನಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದೇನೆ. ಇದಕ್ಕೆ ಹೆಚ್ಚಿನ ಅಭ್ಯಾಸದ ಅಗತ್ಯವಿದೆ. ಭೋಪಾಲ್ನಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ಗಾಗಿ ಸಾಕಷ್ಟು ತಯಾರಿ ನಡೆಸಿದ್ದೆ. ಈಜುವಾಗ ಬಲಗೈ ಗಾಯವಾಗಿದೆ. ಅದರಿಂದ ಕೆಲವು ಸಮಸ್ಯೆಗಳಿದ್ದವು. ಕ್ರೀಡೆ ಮತ್ತು ಅಭ್ಯಾಸದ ಸಮಯದಲ್ಲಿ ಇದು ಆಗಾಗ ಆಗುತ್ತದೆ. ಆದರೆ ಇದು ದೊಡ್ಡ ವಿಷಯವಲ್ಲ. ನಮ್ಮ ಸಂಪೂರ್ಣ ಗಮನ ಆಟದ ಕಡೆಗೆ ಇರಬೇಕು' ಎಂದು ವೇದಾಂತ್ ಹೇಳಿದರು.
ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ: ಕ್ರೀಡೆಯಲ್ಲೇ ಮುಂದುವರಿತ್ತೀರಾ ಅಥವಾ ಸಿನಿಮಾದತ್ತ ಮುಖ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ವೇದಾಂತ್ 'ನನಗೆ ಸಿನಿಮಾಗಳತ್ತ ಹೆಚ್ಚು ಒಲವಿಲ್ಲ. ಸಿನಿಮಾ ನೋಡುವುದಕ್ಕಿಂತ ಕ್ರೀಡೆಯಲ್ಲಿ ಆಸಕ್ತಿ ಹೆಚ್ಚು' ಎಂದು ಹೇಳಿದರು. ಇನ್ನು, ತಮ್ಮ ತಂದೆ ಆರ್. ಮಾಧವನ್ ಬಗ್ಗೆ ಮಾತನಾಡುತ್ತ, ಪಂದ್ಯ ನಡೆದಾಗಲೆಲ್ಲ ತಂದೆ ಆರ್. ಮಾಧವನ್ ಸಾಕಷ್ಟು ಬೆಂಬಲ ನೀಡುತ್ತಾರೆ. ಪಂದ್ಯದ ಮೊದಲು ನನ್ನನ್ನು ಉತ್ತೇಜಿಸುತ್ತಾರೆ. ನಾನು ಅವರ ಹಲವು ಸಿನಿಮಾಗಳನ್ನು ನೋಡಿದ್ದೇನೆ. ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎಂದರು.
ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ನನ್ನ ಗುರಿ: ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಡಬೇಕು ಎಂಬುದು ನನ್ನ ಕನಸು. ಇದಕ್ಕಾಗಿ ಶ್ರಮಿಸುತ್ತಿದ್ದೇನೆ. ಅಪ್ಪ ತಮ್ಮದೇ ಆದ ಕೆಲಸವನ್ನು ಮಾಡುತ್ತಿದ್ದಾರೆ. ಜತೆಗೆ ಅವರು ಈ ಕ್ಷೇತ್ರದಲ್ಲಿ ನನ್ನ ಸಾಧನೆಯನ್ನು ಪ್ರಶಂಸಿಸುತ್ತಾರೆ. ನಾನು ದೊಡ್ಡ ಸ್ಪರ್ಧೆಯನ್ನು ಎದುರಿಸಿದಾಗ, ಅವರು ನನಗೆ ಕರೆ ಮಾಡಿ ಉತ್ತಮ ಸಲಹೆ ನೀಡುತ್ತಾರೆ ಎಂದು ವೇದಾಂತ್ ಹೇಳಿದರು.
ಡ್ಯಾನಿಶ್ ಓಪನ್‌ನಲ್ಲಿ ಚಿನ್ನದ ಪದಕ:2022ರಲ್ಲಿ ಡೆನ್ಮಾರ್ಕ್‌ನ ಕೋಪನ್ ಹೇಗನ್‌ನಲ್ಲಿ ನಡೆದ ಡ್ಯಾನಿಶ್ ಓಪನ್ ಈಜುಕೂಟದಲ್ಲಿ ವೇದಾಂತ್ ಚಿನ್ನ, ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು. 800 ಮೀಟರ್ಸ್ ಹಾಗೂ 1500 ಮೀಟರ್ಸ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ 16 ವರ್ಷದ ವೇದಾಂತ್ ಮಾಧವನ್ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದ್ದರು. 800 ಮೀಟರ್ಸ್ ಗುರಿಯನ್ನು 8 ನಿಮಿಷ 17.28 ಸೆಕೆಂಡ್‌ಗಳಲ್ಲಿ ತಲುಪಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು.
ಈಜು ಸ್ಪರ್ಧೆಯಲ್ಲಿ ಹೊಸ ದಾಖಲೆ: ಕಳೆದ ವರ್ಷ ಒಡಿಶಾದಲ್ಲಿ ನಡೆದಿದ್ದ 48ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್ಶಿಪ್ನಲ್ಲಿ 1500 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಬರೆಯುವುದರ ಜೊತೆಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಕೇವಲ 16:01.73 ಸೆಕೆಂಡ್ನಲ್ಲಿ ಗುರಿ ಮುಟ್ಟಿದ್ದು, ಈ ಮೂಲಕ ಹೊಸದೊಂದು ಇತಿಹಾಸ ಸೃಷ್ಟಿಸಿದ್ದರು.
ಇದನ್ನೂ ಓದಿ:ಈಜು ಸ್ಪರ್ಧೆಯಲ್ಲಿ ದಾಖಲೆ ಬರೆದ ನಟ ಮಾಧವನ್ ಪುತ್ರ..1500 ಮೀ. ಫ್ರೀಸ್ಟೈಲ್ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ವೇದಾಂತ್!