ಕೊಚ್ಚಿ: 2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿರುವ ಭಾರತದ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ , ತಾವೂ ಈ ಯಶಸ್ಸನ್ನು ಒಂದೇ ಕಿಡ್ನಿಯೊಂದಿಗೆ ಸಾಧಿಸಿದ್ದೆ ಎಂಬ ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಐಎಎಎಫ್ ವಿಶ್ವ ಅಥ್ಲೆಟಿಕ್ಸ್ ಫೈನಲ್‌ನಲ್ಲಿ ಚಿನ್ನದ ಪದಕ ವಿಜೇತರಾಗಿರುವ ಅಂಜು , ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ತಾವೂ ಒಂದು ಕಿಡ್ನಿಯನ್ನು ಹೊಂದಿದ್ದು, ಜೊತೆ ಹಲವಾರು ರೀತಿಯ ಅಲರ್ಜಿ ಹೊಂದಿದ್ದರೂ ತಾವೂ ಚಿನ್ನದ ಪದಕವನ್ನು ಗೆದ್ದಿದ್ದಾಗಿ ತಿಳಿಸಿದ್ದಾರೆ.
" ಇದನ್ನು ನಂಬುತ್ತೀರೋ ಅಥವಾ ಇಲ್ಲವೋ, ನಾನು ಕೆಲವೇ ಅದೃಷ್ಟಶಾಲಿಗಳಲ್ಲಿ ಒಬ್ಬಳು, ಏಕೆಂದರೆ ನಾನು ಒಂದೇ ಕಿಡ್ನಿಯೊಂದಿಗೆ ವಿಶ್ವಮಟ್ಟದ ಟೂರ್ನಿಯಲ್ಲಿ(2005 ಐಎಎಎಫ್ ವಿಶ್ವಚಾಂಪಿಯನ್ಶಿಪ್) ಅಗ್ರಸ್ಥಾನವನ್ನು ತಲುಪಿದ್ದೆ. ಅದರ ಜೊತೆಗೆ ಅಲರ್ಜಿ, ಇತರೆ ನೋವುಗಳ ನಡುವೆ ನಾನು ಪ್ರಶಸ್ತಿ ಜಯಿಸಿದ್ದೆ. ನಾವು ಇದನ್ನು ಕೋಚ್ಗಳ ಮ್ಯಾಜಿಕ್ ಅವರ ಅವರ ಟ್ಯಾಲೆಂಟ್ ಎಂದು ಕರೆಯಬಹುದು" ಎಂದು ಅಂಜು ಬಾಬಿ ಜಾರ್ಜ್ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಅನ್ನು ಅವರು ಕ್ರೀಡಾ ಸಚಿವ ಕಿರಣ್ ರಿಜಿಜು, ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಭಾರತ ಕ್ರೀಡಾ ಪ್ರಾಧಿಕಾರ ಅಧಿಕೃತ ಟ್ವಟರ್ ಖಾತೆಗಳನ್ನ ಟ್ಯಾಗ್ ಮಾಡಿದ್ದಾರೆ.
ಅಂಜು ಟ್ವೀಟ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಅಂಜು, ಇದು ನಿಮ್ಮ ಕಠಿಣ ಪರಿಶ್ರಮ ಹಾಗೂ ತರಬೇತುದಾರರು ಮತ್ತು ಇಡೀ ತಾಂತ್ರಿಕ ತಂಡದ ಬೆಂಬಲದೊಂದಿದೆ ಭಾರತಕ್ಕೆ ಪ್ರಶಸ್ತಿ ಮತ್ತು ಗೌರವಗಳನ್ನು ತಂದುಕೊಡಬೇಕೆಂಬ ನಿಮ್ಮ ದೈರ್ಯ ಹಾಗೂ ದೃಡ ನಿಶ್ಚಯವಾಗಿತ್ತು ಎಂದು ತಿಳಿಸಿದ್ದಾರೆ.
ಅಂಜು 2003ರ ಐಎಎಎಫ್ ವಿಶ್ವಚಾಂಪಿಯನ್ ಶಿಪ್ನಲ್ಲಿ(ಪ್ಯಾರೀಸ್) ಪದಕ, ಹಾಗೂ 2005ರ ಐಎಎಎಫ್ ವಿಶ್ವ ಅಥ್ಲೆಟಿಕ್ಸ್ ಫೈನಲ್ಸ್(ಮೊನಾಕೋ) ನಲ್ಲಿ ಚಿನ್ನಕ ಪದಕ ಗೆದ್ದಿರುವ ಭಾರತದ ಏಕಮಾತ್ರ ಆಥ್ಲೀಟ್. ಇವರು ಫೀಲ್ಡ್ ಮತ್ತು ಟ್ರ್ಯಾಕ್ ವಿಭಾಗದಲ್ಲಿ ಸ್ಪರ್ಧಿಸುವ ಯುವ ಕ್ರೀಡಾಪಟುಗಳಿಗೆ ಮಾದರಿ ಎಂದು ಭಾರತದ ಅಥ್ಲೆಟಿಕ್ಸ್ ಫೆಡರೇಷನ್ ತಿಳಿಸಿದೆ.
ಅಂಜು ಅವರು 2004ರ ಅಥೆನ್ಸ್ ಒಲಿಂಪಿಕ್ಸ್ನಲ್ಲಿ 6ನೇ ಸ್ಥಾನಪಡೆದಿದ್ದು ಅವರ ಅತ್ಯುತ್ತಮ ಒಲಿಂಪಿಕ್ಸ್ ಸಾಧನೆಯಾಗಿತ್ತು. 2007ರಲ್ಲಿ ಅಮೆರಿಕಾದ ಮರಿಯಾನ್ ಜೋನ್ಸ್ ಡೂಪಿಂಗ್ನಲ್ಲಿ ಸಿಕ್ಕಿಬಿದ್ದ ಮೇಲೆ ಅಂಜುಗೆ 5ನೇ ಸ್ಥಾನ ಲಭಿಸಿತ್ತು.