ವಾಷಿಂಗ್ಟನ್(ಅಮೆರಿಕ): ಉಕ್ರೇನ್ ಮೇಲೆ ಭೀಕರ ಯುದ್ಧ ಮಾಡುತ್ತಿರುವ ರಷ್ಯಾದ ಆಕ್ರಮಣ ನೀತಿ ವಿರುದ್ಧ ಹಲವು ದೇಶಗಳು ವಿಮಾನಗಳ ಹಾರಾಟ, ಆರ್ಥಿಕತೆ ಸೇರಿ ಹಲವು ನಿರ್ಬಂಧಗಳನ್ನು ಹೇರಿವೆ. ಮತ್ತೊಂದೆಡೆ ಜಗತ್ತಿನ ಕ್ರೀಡೆಗಳಿಂದಲೂ ರಷ್ಯಾವನ್ನು ದೂರ ಇಡುವ ನಿರ್ಬಂಧಗಳು ಮತ್ತಷ್ಟು ಹೆಚ್ಚಿವೆ. ಯಾವ್ಯಾವ ಕ್ರೀಡೆಗಳಿಂದ ರಷ್ಯಾಗೆ ನಿರ್ಬಂಧ ವಿಧಿಸಲಾಗುತ್ತಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ..
ಬಿಲ್ಲುಗಾರಿಕೆ..ವಿಶ್ವ ಬಿಲ್ಲುಗಾರಿಕೆಯ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ರಷ್ಯಾ ಮತ್ತು ಬೆಲಾರಸ್ ಧ್ವಜಗಳು ಮತ್ತು ಗೀತೆಗಳನ್ನು ನಿಷೇಧಿಸಲಾಗಿದೆ. ಯುದ್ಧ ಮಾಡುತ್ತಿರುವ ರಷ್ಯಾಗೆ ಬೆಲಾರಸ್ ಬೆಂಬಲ ನೀಡಿದೆ.
ಅಥ್ಲೆಟಿಕ್ಸ್..ಈ ವಾರಾಂತ್ಯದಲ್ಲಿ ಒಮನ್‌ನಲ್ಲಿ ನಡೆಯಲಿರುವ ವರ್ಲ್ಡ್ ರೇಸ್ ವಾಕಿಂಗ್ ಟೀಮ್ ಚಾಂಪಿಯನ್‌ಶಿಪ್, ಈ ತಿಂಗಳು ಸರ್ಬಿಯಾದಲ್ಲಿ ನಡೆಯುವ ವಿಶ್ವ ಒಳಾಂಗಣ ಚಾಂಪಿಯನ್‌ಶಿಪ್ ಹಾಗೂ ಜುಲೈನಲ್ಲಿ ಒರೆಗಾನ್‌ನ ಯುಜೀನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್ ಸೇರಿದಂತೆ ಎಲ್ಲಾ ವಿಶ್ವ ಅಥ್ಲೆಟಿಕ್ಸ್ ಸರಣಿಯ ಕಾರ್ಯಕ್ರಮಗಳಿಂದ ರಷ್ಯಾ, ಬೆಲಾರಸ್ ಅಥ್ಲೀಟ್‌ಗಳು, ಅಧಿಕಾರಿಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಕಾರ್ ರೇಸಿಂಗ್..ಸೆಪ್ಟೆಂಬರ್‌ನಲ್ಲಿ ಸೋಚಿಯಲ್ಲಿ ನಡೆಯಲಿರುವ ರಷ್ಯಾದ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಫಾರ್ಮುಲಾ ಒನ್ ರದ್ದುಗೊಳಿಸಲಾಗಿದೆ. ಕಾರ್ ರೇಸಿಂಗ್ ಅಂತಾರಾಷ್ಟ್ರೀಯ ಸಂಸ್ಥೆ ಎಫ್‌ಐಎ ಈ ಬಗ್ಗೆ ಮಾಹಿತಿ ನೀಡಿದ್ದು, ರಷ್ಯಾದ ಚಾಲಕರು ಸ್ಪರ್ಧಿಸಬಹುದು. ಆದರೆ ತನ್ನ ದೇಶದ ಧ್ವಜದ ಅಡಿಯಲ್ಲಿ ಅಲ್ಲ ಎಂದಿದೆ. ಜೂನ್‌ನಲ್ಲಿ ಸೋಚಿಯಲ್ಲಿ ನಡೆಯಬೇಕಿದ್ದ ಇಂಟರ್‌ಕಾಂಟಿನೆಂಟಲ್ ಡ್ರಿಫ್ಟಿಂಗ್ ಕಪ್ ರದ್ದು ಮಾಡಲಾಗಿದೆ.
ಬ್ಯಾಡ್ಮಿಂಟನ್..ರಷ್ಯಾ ಮತ್ತು ಬೆಲಾರಸ್ ಅಥ್ಲೀಟ್‌ಗಳು ಮತ್ತು ಅಧಿಕಾರಿಗಳು ಮಾರ್ಚ್ 8 ರಿಂದ ಎಲ್ಲಾ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಪಂದ್ಯಾವಳಿಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಈ ಎರಡೂ ದೇಶಗಳಲ್ಲಿ ನಡೆಯಬೇಕಿದ್ದ ಎಲ್ಲಾ ಬಿಡಬ್ಲ್ಯೂಎಫ್ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ಈ ವಾರ ಮತ್ತು ಮುಂದಿನ ವಾರ ಸ್ಪೇನ್‌ನಲ್ಲಿ ನಡೆಯಲಿರುವ ಎರಡು ಪ್ಯಾರಾ ಈವೆಂಟ್‌ಗಳಲ್ಲಿ ಕೆಲವು ರಷ್ಯಾದ ಆಟಗಾರರಿಗೆ ಅವಕಾಶ ನೀಡಲಾಗಿದೆ. ಆದರೆ ತಮ್ಮ ದೇಶದ ಧ್ವಜಗಳ ಅಡಿ ಆಡುವಂತಿಲ್ಲ. ರಾಷ್ಟ್ರ ಗೀತೆ ಹಾಡಲು ಅವಕಾಶ ನೀಡಿಲ್ಲ.
ಬಾಸ್ಕೆಟ್‌ಬಾಲ್..ಅಂತಾರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಫೆಡರೇಶನ್‌ನಿಂದ ರಷ್ಯಾದ ತಂಡಗಳು ಮತ್ತದರ ಅಧಿಕಾರಿಗಳನ್ನು ಎಲ್ಲಾ ಸ್ಪರ್ಧೆಗಳಿಂದ ಅಮಾನತುಗೊಳಿಸಲಾಗಿದೆ. ಯುರೋಲೀಗ್ ರಷ್ಯಾದ ಕ್ಲಬ್‌ಗಳಾದ ಸಿಎಸ್‌ಕೆಎ ಮಾಸ್ಕೋ, ಯುನಿಕ್ಸ್ ಕಜಾನ್ ಹಾಗೂ ಜೆನಿತ್ ಸೇಂಟ್ ಪೀಟರ್ಸ್‌ಬರ್ಗ್ ಅನ್ನು ಅಮಾನತುಗೊಳಿಸಿದೆ. ಲೊಕೊಮೊಟಿವ್ ಕುಬನ್ ಕ್ರಾಸ್ನೋಡರ್ ಅವರನ್ನು ಯುರೋಕಪ್‌ನಿಂದ ದೂರ ಇಡಲಾಗಿದೆ.
ಕ್ಯಾನೋಯಿಂಗ್..ರಷ್ಯಾ ಮತ್ತು ಬೆಲಾರಸ್‌ನ ಅಥ್ಲೀಟ್‌ಗಳು ಯಾವುದೇ ಇಂಟರ್‌ನ್ಯಾಶನಲ್ ಕ್ಯಾನೋ ಫೆಡರೇಶನ್ ಈವೆಂಟ್‌ಗಳಲ್ಲಿ ಸ್ಪರ್ಧಿಸದಂತೆ ಅಮಾನತುಗೊಳಿಸಲಾಗಿದೆ. ಆ ದೇಶಗಳ ಅಧಿಕಾರಿಗಳು ಯಾವುದೇ ಐಸಿಎಫ್ ಅನುಮೋದಿತ ಸಮಾರಂಭದಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧಿಸಲಾಗಿದೆ.
ಸ್ಪೋರ್ಟ್ ಕ್ಲೈಂಬಿಂಗ್..ಏಪ್ರಿಲ್‌ನಲ್ಲಿ ಮಾಸ್ಕೋದಲ್ಲಿ ನಡೆಯಲಿರುವ ಬೌಲ್ಡರ್ ಮತ್ತು ಸ್ಪೀಡ್ ವಿಶ್ವಕಪ್ ಅನ್ನು ಸ್ಥಳಾಂತರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕರ್ಲಿಂಗ್..ನವೆಂಬರ್‌ನಲ್ಲಿ ರಷ್ಯಾದ ಪೆರ್ಮ್‌ನಲ್ಲಿ ಯುರೋಪಿಯನ್ ಚಾಂಪಿಯನ್‌ಶಿಪ್‌ಗಳನ್ನೂ ಸ್ಥಳಾಂತರಿಸಲಾಗುತ್ತಿದೆ. ವರ್ಲ್ಡ್ ಕರ್ಲಿಂಗ್ ಫೆಡರೇಶನ್ ಈ ತಿಂಗಳು ಕೆನಡಾದಲ್ಲಿ ಮಹಿಳಾ ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಪ್ರಿಲ್‌ನಲ್ಲಿ ಲಾಸ್ ವೇಗಾಸ್‌ನಲ್ಲಿ ಪುರುಷರ ವಿಶ್ವ ಚಾಂಪಿಯನ್‌ಶಿಪ್‌ನಿಂದ ರಷ್ಯಾವನ್ನು ಹೊರಗಿಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಸೈಕ್ಲಿಂಗ್..ಇಂಟರ್ನ್ಯಾಷನಲ್ ಸೈಕ್ಲಿಂಗ್ ಯೂನಿಯನ್ ರಷ್ಯಾ ಮತ್ತು ಬೆಲಾರಸ್ ರೈಡರ್ಸ್‌ಅನ್ನು ಆ ದೇಶಗಳ ಧ್ವಜ ಮತ್ತು ರಾಷ್ಟ್ರ ಗೀತೆಗಳು ಇಲ್ಲದೆ ತಟಸ್ಥರಾಗಿ ಸ್ಪರ್ಧಿಸಲು ಅವಕಾಶ ನೀಡುತ್ತಿದೆ. ಆದರೆ ಎರಡೂ ದೇಶಗಳ ಪ್ರಾಯೋಜಕರಿಗೆ ನಿರ್ಬಂಧ ವಿಧಿಸಲಾಗಿದೆ.
ಈಕ್ವೆಸ್ಟ್ರಿಯನ್..ಜುಲೈನಲ್ಲಿ ಮಾಸ್ಕೋದಲ್ಲಿ ನಡೆಯಬೇಕಿದ್ದ ಯುರೇಷಿಯನ್ ಚಾಂಪಿಯನ್‌ಶಿಪ್ ಸೇರಿದಂತೆ ರಷ್ಯಾದ 51 ಮತ್ತು ಬೆಲಾರಸ್ 6 ಇಂಟರ್ನ್ಯಾಷನಲ್ ಇಕ್ವೆಸ್ಟ್ರಿಯನ್ ಫೆಡರೇಶನ್ ರದ್ದುಗೊಳಿಸಿದೆ.
ಫೆನ್ಸಿಂಗ್..ರಷ್ಯಾದ ಅಲಿಶರ್ ಉಸ್ಮಾನೋವ್ ಅವರು ಅಂತಾರಾಷ್ಟ್ರೀಯ ಫೆನ್ಸಿಂಗ್ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದಿದ್ದಾರೆ.
ಜಿಮ್ನಾಸ್ಟಿಕ್ಸ್..ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಫೆಡರೇಶನ್ ರಷ್ಯಾ ಮತ್ತು ಬೆಲಾರಸ್‌ನಲ್ಲಿನ ಎಲ್ಲಾ ವಿಶ್ವಕಪ್ ಮತ್ತು ವರ್ಲ್ಡ್ ಚಾಲೆಂಜ್ ಕಪ್ ಈವೆಂಟ್‌ಗಳನ್ನು ರದ್ದುಗೊಳಿಸಲಾಗಿದೆ. ಎಲ್ಲಾ ಎಫ್‌ಐಜಿ ಕೂಟಗಳಲ್ಲಿ ರಷ್ಯಾ ಮತ್ತು ಬೆಲಾರಸ್ ಧ್ವಜಗಳು ಮತ್ತು ಗೀತೆಗಳನ್ನು ನಿಷೇಧಿಸಲಾಗಿದೆ.
ಫೀಲ್ಡ್ ಹಾಕಿ..ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮಹಿಳಾ ಜೂನಿಯರ್ ವಿಶ್ವಕಪ್‌ನಿಂದ ರಷ್ಯಾ ಹೊರಗುಳಿದಿದೆ.
ಐಸ್ ಹಾಕಿ..ಎಲ್ಲಾ ಅಂತಾರಾಷ್ಟ್ರೀಯ ಐಸ್ ಹಾಕಿ ಫೆಡರೇಶನ್ ಸ್ಪರ್ಧೆಗಳಿಂದ ರಷ್ಯಾ ಮತ್ತು ಬೆಲಾರಸ್ ಅನ್ನು ನಿಷೇಧಿಸಲಾಗಿದೆ. ಮೇ ತಿಂಗಳಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಿಂದ ರಷ್ಯಾ ಪುರುಷರನ್ನು ಹೊರಗಿಡಲಾಗಿದೆ. 2023 ರಲ್ಲಿ ರಷ್ಯಾದಲ್ಲಿ ನಡೆಯಲಿರುವ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ಗಳು ಸೆರ್ಬಿಯಾಕ್ಕೆ ಸ್ಥಳಾಂತರಗೊಂಡಿವೆ.
ಜೂಡೋ..ಮೇನಲ್ಲಿ ನಡೆಯಬೇಕಿದ್ದ ಕಜನ್ ಗ್ರ್ಯಾಂಡ್ ಸ್ಲ್ಯಾಮ್, ವಿಶ್ವ ಜೂಡೋ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಂತಾರಾಷ್ಟ್ರೀಯ ಜೂಡೋ ಫೆಡರೇಶನ್‌ನ ಗೌರವ ಅಧ್ಯಕ್ಷ ಮತ್ತು ರಾಯಭಾರಿ ಸ್ಥಾನದಿಂದ ತೆಗೆದು ಹಾಕಲಾಗಿದೆ. ಯುರೋಪಿಯನ್ ಜೂಡೋ ಒಕ್ಕೂಟದ ರಷ್ಯಾದ ಅಧ್ಯಕ್ಷ ಸೆರ್ಗೆ ಸೊಲೊವೆಚಿಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕರಾಟೆ..ಮಾಸ್ಕೋದಲ್ಲಿ ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ಕರಾಟೆ 1-ಪ್ರೀಮಿಯರ್ ಲೀಗ್ ಈವೆಂಟ್ ಅನ್ನು ಸ್ಥಳಾಂತರಿಸಲಾಗಿದೆ.