ನವದೆಹಲಿ: 17 ದಿನಗಳ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಅತ್ಯುತ್ತಮ ಸಾಧನೆ ಮಾಡಿದೆ. ಇದೀಗ ಪ್ಯಾರಾಲಿಂಪಿಕ್ಸ್ ಕಡೆ ಎಲ್ಲರ ಗಮನ ನೆಟ್ಟಿದ್ದು, 54 ಸದಸ್ಯರ ಭಾರತ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ರಾಷ್ಟ್ರೀಯ ಆಡಳಿತ ಮಂಡಳಿ ಹಿಂದಿನ ಕ್ರೀಡಾಕೂಟಕ್ಕಿಂತ ಹೆಚ್ಚಿನ ಯಶಸ್ಸು ಸಾಧಿಸಿ ಹಿಂದಿರುಗುವಂತೆ ಹರಸಿ ಬೀಳ್ಕೊಟ್ಟಿದೆ.
ಭಾರತ ಈ ಬಾರಿ 9 ಕ್ರೀಡೆಗಳಲ್ಲಿ ಭಾಗವಹಿಸಲಿದೆ. ಎಫ್ 46 ಜಾವಲಿನ್ ಥ್ರೋನಲ್ಲಿ ದೇವೇಂದ್ರ ಜಜಾರಿಯಾ ಪದಕ ಗೆಲ್ಲುವ ಕ್ರೀಡಾಪಟುವಾಗಿದ್ದಾರೆ. ಅವರು 2004 ಮತ್ತು 2016ರಲ್ಲಿ ಚಿನ್ನದ ಪದಕ ಪಡೆದಿದ್ದರು. ಹೈಜಂಪ್ನಲ್ಲಿ ತಮಿಳುನಾಡಿನ ಮರಿಯಪ್ಪನ್ ತಂಗವೇಲು ಹಾಗೂ ವಿಶ್ವಚಾಂಪಿಯನ್ ಸಂದೀಪ್ ಚೌದರಿ(F64 ಜಾವಲಿನ್ ಥ್ರೋ) ಭಾರತಕ್ಕೆ ಪದಕದ ಭರವಸೆಯನ್ನು ಮೂಡಿಸಿದ್ದಾರೆ.
2016ರ ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಮರಿಯಪ್ಪನ್ ಚಿನ್ನದ ಪದಕ ಜಯಿಸಿದ್ದರು. ಆಗಸ್ಟ್ 24ರಂದು ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜ ಹಿಡಿದು ಸಾಗಲಿದ್ದಾರೆ. ಟೋಕಿಯೋ ಪ್ಯಾರಾಲಿಂಪಿಕ್ಸ್ ಸೆಪ್ಟೆಂಬರ್ 5ರಂದು ಮುಗಿಯಲಿದೆ.
ಆತ್ಮವಿಶ್ವಾಸ 1.3 ಬಿಲಿಯನ್ ಭಾರತೀಯರಿಗೆ ಸ್ಫೂರ್ತಿ
ನಮ್ಮ ಪ್ಯಾರಾ ಕ್ರೀಡಾಪಟುಗಳ ಮಹತ್ವಾಕಾಂಕ್ಷೆ ಮತ್ತು ಆತ್ಮ ವಿಶ್ವಾಸ 1.3 ಬಿಲಿಯನ್ ಭಾರತೀಯರಿಗೆ ಸ್ಫೂರ್ತಿ ನೀಡುತ್ತದೆ. ಅವರ ಧೈರ್ಯದ ಮುಂದೆ, ಎಂತಹ ದೊಡ್ಡ ಸವಾಲುಗಳು ಕೂಡ ತಲೆಬಾಗುತ್ತವೆ. ಈ ಬಾರಿ ಕ್ರೀಡಾಕೂಟದಲ್ಲಿ ಭಾಗವಹಿಸುವ ನಮ್ಮ ಪ್ಯಾರಾ ಅಥ್ಲೀಟ್‌ಗಳ ಸಂಖ್ಯೆ ಕಳೆದ ಆವೃತ್ತಿಗಿಂತ ಮೂರು ಪಟ್ಟು ದೊಡ್ಡದಾಗಿದೆ. ನಿಮ್ಮ ಸಾಮರ್ಥ್ಯಗಳಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ನಿಮ್ಮ ಪ್ರದರ್ಶನವೂ ಕಳೆದ ಬಾರಿಗಿಂತ ಉತ್ತಮವಾಗಿರುತ್ತದೆ ಎಂದು ನಾನು ನಂಬುತ್ತೇನೆ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ವಿಡಿಯೋ ಸಂದೇಶ ರವಾನಿಸಿದ್ದಾರೆ.
ಪ್ಯಾರ ಅಥ್ಲೀಟ್ಗಳು 3 ಖೇಲ್ ರತ್ನ, 7 ಪದ್ಮಶ್ರೀ ಮತ್ತು 33 ಅರ್ಜುನ್ ಪ್ರಶಸ್ತಿಗಳನ್ನು ಪಡೆದಿರುವುದು ಶ್ರೇಷ್ಠ ಸಾಧನೆಯಾಗಿದೆ ಎಂದು ಠಾಕೂರ್ ಕ್ರೀಡಾಪಟುಗಳನ್ನು ಪ್ರಶಂಸಿಸಿದ್ದಾರೆ. ಎಲ್ಲರಿಗೂ ಇದು ಸಾಧ್ಯವಿಲ್ಲ, ಆದರೆ ನಿಮ್ಮ ಕಠಿಣ ಪರಿಶ್ರಮ ಮತ್ತು ಗೆಲ್ಲಬೇಕೆಂಬ ಆಶಯ ಮತ್ತು ನಿಮ್ಮ ಉತ್ಸಾಹವು ಎಲ್ಲಾ ಸವಾಲುಗಳನ್ನು ವಿಜಯಗಳಾಗಿ ಪರಿವರ್ತಿಸುತ್ತದೆ . ನೀವು ಟೋಕಿಯೋದಲ್ಲಿ ಹಿಂದಿಗಿಂತ ಈ ಬಾರಿ ಹೆಚ್ಚು ಪದಕ ಪಡೆಯುವ ಆಲೋಚನೆಯೊಂದಿಗೆ ಹೊರಡುತ್ತೀರೆಂದು ನಾನು ಭಾವಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
2016ರ ರಿಯೋ ಗೇಮ್ಸ್ನಲ್ಲಿ ಭಾರತ 2 ಚಿನ್ನ , ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿತ್ತು. ಪಿಸಿಐ ಅಧ್ಯಕ್ಷರಾಗಿರುವ ದೀಪಾ ಮಲಿಕ್ ಶಾಟ್ಪುಟ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಈ ಬಾರಿಯ ಪ್ಯಾರಾಲಿಂಪಿಕ್ಸ್ ಆಗಸ್ಟ್ 24ರಿಂದ ಆರಂಭವಾಗಲಿದೆ. ಭಾರತೀಯ ಕ್ರೀಡಾಪಟುಗಳ ಅಭಿಯಾನ ಆಗಸ್ಟ್ 27ರಿಂದ ಪ್ರಾರಂಭವಾಗಲಿದ್ದು, ಎಲ್ಲಾ ಇವೆಂಟ್ಗಳು ಡಿಡಿ ಸ್ಪೋರ್ಟ್ಸ್ ಮತ್ತು ಯುರೂಸ್ಪೋರ್ಟ್ಸ್ ಚಾನೆಲ್ಗಳಲ್ಲಿ ಪ್ರಸಾರವಾಗಲಿದೆ.
ಇದನ್ನು ಓದಿ: ಕಂಚು ಗೆದ್ದಿದ್ದಕ್ಕೆ ಖುಷಿಯಿದೆ.. ಪ್ಯಾರಿಸ್ನಲ್ಲಿ ಚಿನ್ನಕ್ಕೆ ಗುರಿ: ಲವ್ಲಿನಾ ಸಂದರ್ಶನ