ತಮುಲ್‌ಪುರ್ (ಅಸ್ಸೋಂ):ಅಸ್ಸೋಂನಲ್ಲಿ ಗುರುವಾರ ಮುಕ್ತಾಯಗೊಂಡ 4ನೇ ಏಷ್ಯನ್ ಖೋ ಖೋ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ.
ಫೈನಲ್‌ನಲ್ಲಿ ಭಾರತೀಯ ಪುರುಷರು ನೇಪಾಳವನ್ನು 6 ಅಂಕ ಮತ್ತು ಇನ್ನಿಂಗ್ಸ್‌ನಿಂದ ಸೋಲಿಸಿದರೆ, ಭಾರತೀಯ ಮಹಿಳೆಯರು ಅದೇ ಎದುರಾಳಿಯನ್ನು 33 ಪಾಯಿಂಟ್ ಮತ್ತು ಇನ್ನಿಂಗ್ಸ್‌ನಿಂದ ಸೋಲಿಸಿದರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಭಾರತ ಪುರುಷರು ಶ್ರೀಲಂಕಾ ವಿರುದ್ಧ 45 ಅಂಕಗಳಿಂದ ಜಯ ಸಾಧಿಸಿದ್ದರು. ಮತ್ತೊಂದೆಡೆ, ನೇಪಾಳವು ಬಾಂಗ್ಲಾದೇಶವನ್ನು 1.5 ನಿಮಿಷಗಳ ಅಂತರದಲ್ಲಿ 12 ಅಂಕಗಳಿಂದ ಮಣಿಸಿದೆ.
ಮಹಿಳೆಯರ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತವು ಬಾಂಗ್ಲಾದೇಶವನ್ನು 49 ಅಂಕ ಮತ್ತು ಇನ್ನಿಂಗ್ಸ್‌ನಿಂದ ಪರಾಭವಗೊಳಿಸಿದೆ. ಎರಡನೇ ಸೆಮಿಫೈನಲ್‌ನಲ್ಲಿ, ನೇಪಾಳವು ಶ್ರೀಲಂಕಾವನ್ನು 59 ಪಾಯಿಂಟ್ ಮತ್ತು ಇನಿಂಗ್ಸ್‌ನಿಂದ ಸೋಲಿಸಿ ಫೈನಲ್ಗೆ ಬಂದಿತ್ತು. ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಕ್ರಮವಾಗಿ ಶ್ರೀಲಂಕಾ, ಬಾಂಗ್ಲಾದೇಶ 3ನೇ ಸ್ಥಾನ ಹಂಚಿಕೊಂಡಿವೆ.
ಚಾಂಪಿಯನ್‌ಶಿಪ್ ಗೆದ್ದಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಟೀಂ ಇಂಡಿಯಾ ನಾಯಕ ಅಕ್ಷಯ್ ಭಂಗ್ರೆ ಹೇಳಿದ್ದಾರೆ. "ಭಾರತೀಯನಾಗಿ, ಭಾರತ ನೆಲದಲ್ಲಿ ಪಂದ್ಯ ಗೆದ್ದಿರುವುದಕ್ಕೆ ಖುಷಿ ಇದೆ. ಭಾಗವಹಿಸಿದ ದೇಶಗಳು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಪಂದ್ಯಗಳನ್ನು ನೋಡುವುದು ಅಷ್ಟೇ ರೋಮಾಂಚನಕಾರಿಯಾಗಿತ್ತು. ಇಲ್ಲಿ ಆಡಲು ಉತ್ತಮ ವಾತಾವರಣ ಇತ್ತು. ಪ್ರೇಕ್ಷಕರ ಬೆಂಬಲ ಯಾವಾಗಲೂ ಮುಖ್ಯ. ಇದು ಆಟಗಾರರನ್ನು ಅತ್ಯುತ್ತಮ ಪ್ರದರ್ಶನ ನೀಡಲು ಪ್ರೇರೇಪಿಸುತ್ತದೆ" ಎಂದು ಅಕ್ಷಯ್ ಹೇಳಿದ್ದಾರೆ.