ಇಂಗ್ಲೆಂಡ್:ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿದ್ದ, ಕಳೆದ ವರ್ಷದ ವಿಂಬಲ್ಡನ್ ರನ್ನರ್ ಅಪ್ ಮ್ಯಾಟಿಯೊ ಬೆರೆಟ್ಟಿನಿಗೆ ಕೊರೊನಾ ಆಘಾತ ನೀಡಿದೆ. ಇಂದು ಮೊದಲ ಸುತ್ತಿನ ಆಟದ ಮೂಲಕ ಅಭಿಯಾನ ಆರಂಭಿಸಬೇಕಿದ್ದ ಇಟಲಿ ಟೆನಿಸ್ಸಿಗನಿಗೆ ಕೊರೊನಾ ದೃಢಪಟ್ಟಿದ್ದು, ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದಾರೆ.
ಇಂದು ನಡೆಯಬೇಕಿದ್ದ ಮೊದಲ ಸುತ್ತಿನ ಪಂದ್ಯಕ್ಕೂ ಕೆಲವು ಗಂಟೆಗಳ ಮೊದಲು ಮ್ಯಾಟಿಯೋ ಬೆರೆಟ್ಟಿನಿ ಕೊರೊನಾ ಪರೀಕ್ಷೆಗೆ ಒಳಗಾದಾಗ ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್ ಮಾಹಿತಿ ಹಂಚಿಕೊಂಡಿದ್ದು, ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಮ್ಯಾಟಿಯೊ ಬೆರೆಟ್ಟಿನಿ ಪ್ರತ್ಯೇಕವಾಗಿದ್ದರು. ಇಂದು ನಡೆಸಿದ ಕೊರೊನಾ ಟೆಸ್ಟ್ನಲ್ಲಿ ಪಾಸಿಟಿವ್ ಬಂದಿದ್ದು, ಅವರು ಪಂದ್ಯಾವಳಿಯಿಂದಲೇ ಹೊರನಡೆಯಬೇಕಾಗಿದೆ. ಇದೊಂದು ಆಘಾತಕಾರಿ ವಿಷಯ ಎಂದು ಹೇಳಿದೆ.
2ನೇ ಆಟಗಾರ:ಎರಡು ದಿನಗಳ ಹಿಂದಷ್ಟೇ ಕೊರೊನಾದಿಂದಾಗಿ 2014 ರ ಅಮೆರಿಕ ಓಪನ್ ಚಾಂಪಿಯನ್ ಮತ್ತು 2017 ರ ವಿಂಬಲ್ಡನ್ ಫೈನಲಿಸ್ಟ್ ಆಗಿದ್ದ ಮರಿನ್ ಸಿಲಿಕ್ ಅವರು ಟೂರ್ನಿಯಿಂದ ಹೊರಬಿದ್ದಿದ್ದರು. ಇದೀಗ ಮ್ಯಾಟಿಯೋ ಕೂಡ ಟೂರ್ನಿ ತಪ್ಪಿಸಿಕೊಳ್ಳಲಿದ್ದು, ಇಬ್ಬರು ಪ್ರಭಾವಿ ಆಟಗಾರರ ಅಲಭ್ಯತೆ ವಿಂಬಲ್ಡನ್ಗೆ ಕಾಡಲಿದೆ.