ನವದೆಹಲಿ: ತಮಿಳುನಾಡಿನ ವಿಶ್ವ ದೀನದಯಾಲನ್ ಎಂಬ 18 ವರ್ಷದ ಟೇಬಲ್ ಟೆನಿಸ್ ಆಟಗಾರ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗುವಾಹಟಿಯಿಂದ ಶಿಲ್ಲಾಂಗ್ಗೆ ಟ್ಯಾಕ್ಸಿ ಮೂಲಕ ತೆರಳುವ ವೇಲೆ ಅಪಘಾತ ಸಂಭವಿಸಿದೆ.
ಸೋಮವಾರದಿಂದ ಆರಂಭವಾಗಬೇಕಿದ್ದ 83ನೇ ಸೀನಿಯರ್ ನ್ಯಾಷನಲ್ ಅಂಡ್ ಇಂಟರ್ ಸ್ಟೇಟ್ ಟೇಬಲ್ ಟೆನ್ನಿಸ್ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲು ತಂಡದ ಇತರೆ 3 ಸಹ ಆಟಗಾರರೊಂದಿಗೆ ಗುವಾಹಟಿಯಿಂದ ಶಿಲ್ಲಾಂಗ್ಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ರಮೇಶ್ ಸಂತೋಷ್ ಕುಮಾರ್, ಅಭಿನಾಶ್ ಪ್ರಸನ್ನಾಜಿ ಶ್ರೀನಿವಾಸನ್ ಮತ್ತು ಕಿಶೋರ್ ಕುಮಾರ್ ಎಂಬುವವರು ವಿಶ್ವ ದೀನದಯಾಲನ್ ಜೊತೆಗೆ ಪ್ರಯಾಣಿಸುತ್ತಿದ್ದ ಆಟಗಾರರಾಗಿದ್ದಾರೆ.
ಎದುರಿನಿಂದ ಬರುತ್ತಿದ್ದ 12 ಚಕ್ರಗಳ ಟ್ರೈಲರ್ ಶಾಂಗ್ಬಾಂಗ್ಲಾ ಚೆಕ್ ಪೋಸ್ಟ್ ಬಳಿ ರಸ್ತೆ ವಿಭಜಕಕ್ಕೆ ತಗುಲಿ ನಿಯಂತ್ರಣ ತಪ್ಪಿ ಟ್ಯಾಕ್ಸಿಗೆ ಡಿಕ್ಕಿ ಹೊಡೆದಿದೆ ಎಂದು ಟಿಟಿಎಫ್ಐ ಹೇಳಿಕೆಯಲ್ಲಿ ತಿಳಿಸಿದೆ.