ಟೋಕಿಯೋ:ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಆಗಿರುವ ಓಹ್ ಜಿನ್ಹಯೆಕ್ ವಿರುದ್ಧ ನಡೆದ ಪಂದ್ಯದಲ್ಲಿ ದಾಸ್ ರೋಚಕ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.
ಗುರುವಾರ ಇಲ್ಲಿ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಬಿಲ್ಲುಗಾರ ಅತನು ದಾಸ್ ಕೊನೆ ಕ್ಷಣದಲ್ಲಿ ಒಂದು ಅಂಕ ಹೆಚ್ಚು ಗಳಿಸುವ ಮೂಲಕ ಸೌತ್ ಕೊರಿಯಾದ ಓಹ್ ಜಿನ್ಹಯೆಕ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಬಿಲ್ಲುಗಾರಿಕೆಯಲ್ಲಿ ಭಾರತದ ನಂಬರ್ ಒನ್ ಆಟಗಾರ ದಾಸ್ಗೆ ತಮ್ಮ ವೃತ್ತಿಜೀವನದ ಅತಿದೊಡ್ಡ ಗೆಲುವು ಇದಾಗಿದೆ. ಆಟದಲ್ಲಿ ಓಹ್ ಜಿನ್ಹಯೆಕ್ ಮತ್ತು ಅತನು ದಾಸ್ 5-5 ಪಾಯಿಂಟ್ ಗಳಿಸಿ ಸರಿಸಮಾನಾಗಿ ಮುನ್ನುಗ್ಗುತ್ತಿದ್ದರು.
ಕೊನೆಯ ಕ್ಷಣದಲ್ಲಿ ಓಹ್ ಜಿನ್ಹಯೆಕ್ 9 ಅಂಕಗಳ ಪಡೆದ್ರೆ, ದಾಸ್ 10 ಅಂಕಗಳು ಪಡೆದು ಮುನ್ನಡೆದರು. ಜುಲೈ 31ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ದ ಫುರುಕಾವಾ ಟಕಹರು ವಿರುದ್ಧ ದಾಸ್ ಬಿಲ್ಲಿನ ಯುದ್ಧ ನಡೆಸಲಿದ್ದಾರೆ.
ಪುರುಷರ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಬಿಲ್ಲುಗಾರ ಎ.ದಾಸ್ 6-4 ಅಂಕಗಳ ಅಂತರದಿಂದ ತೈಪೆ ಚೀನಾದ ಡಿಗ್ ಯು ಚಾಂಗ್ ವಿರುದ್ಧ ಜಯ ಗಳಿಸಿ ಮುನ್ನಡೆ ಸಾಧಿಸಿದ್ದರು. ನಾಳೆ ನಡೆಯಲಿರುವ ಬಿಲ್ಲುಗಾರಿಕೆ ಆಟದಲ್ಲಿ ರಷ್ಯಾ ಆಟಗಾರ್ತಿ ಕ್ಸೆನಿಯಾ ಪೆರೋವಾ ವಿರುದ್ಧ ದಾಸ್ ಪತ್ನಿ ದೀಪಿಕಾ ಕುಮಾರಿ ಸೆಣಸಾಟ ನಡೆಸಲಿದ್ದಾರೆ.