ಆಕ್ಲೆಂಡ್: ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಮಂಗಳವಾರ ನಡೆದ ಇಂಗ್ಲೆಂಡ್ ವಿರುದ್ಧದ ಹಾಕಿ ಪಂದ್ಯದಲ್ಲಿ ಭಾರತ ಮಹಿಳಾ ತಂಡ 1-0 ಗೋಲುಗಳಿಂದ ಗೆಲುವು ಸಾಧಿಸಿದೆ.
ಭಾರತ ತಂಡ ಈ ಟೂರ್ನಿಯ ಮೊದಲ ಪಂದ್ಯದಲ್ಲಿ 4-0 ಗೋಲುಗಳಿಂದ ನ್ಯೂಜಿಲ್ಯಾಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ನಂತರದ ಎರಡು ಪಂದ್ಯಗಳಲ್ಲಿ 2-1, 1-0ಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧವೇ ಸೋಲು ಕಂಡಿತ್ತು.
ರಾಣಿ ರಾಂಪಾಲ್ ಆರಂಭದಿಂದಲೇ ಬಿರುಸಿನ ದಾಳಿ ನಡೆಸಿದರು. ಅವರ ಆಟದ ಫಲವಾಗಿ ಪೆನಾಲ್ಟಿ ಕಾರ್ನರ್ ಅವಕಾಶ ಒದಗಿ ಬಂದಿತ್ತು. ಆದರೆ ಅದನ್ನು ಗೋಲಾಗಿ ಪರಿವರ್ತಿಸಿಕೊಳ್ಳುವಲ್ಲಿ ಭಾರತ ತಂಡ ವಿಫಲವಾಯಿತು. ಆದರೂ ತಮ್ಮ ಆಕ್ರಮಣ ಆಟ ಮುಂದುವರಿಸಿದ ತಂಡ 47 ನೇ ನಿಮಿಷದಲ್ಲಿ ಗೋಲು ದಾಖಲಿಸಿತು. ನಾಯಕಿ ರಾಣಿ ರಾಂಪಾಲ್ ಹೊಡೆದ ಆಕರ್ಷಕ ಶಾಟ್ ಇಂಗ್ಲೆಂಡ್ ಗೋಲ್ ಕೀಪರ್ ಕೈಗೆ ಸಿಗದೆ ಗೋಲುಪೆಟ್ಟಿಗೆ ಸೇರಿತು.