ರಿಷಿಕೇಶ :ಹಾಕಿ ಪಂದ್ಯದ ವೇಳೆ ಮಹಿಳಾ ಆಟಗಾರ್ತಿಯೊಬ್ಬರು ಎದುರಾಳಿ ತಂಡದ ಆಟಗಾರ್ತಿಗೆ ಹಾಕಿ ಸ್ಟಿಕ್ನಿಂದ ಹೊಡೆದು ಗಾಯಗೊಳಿಸಿದ ಘಟನೆ ರಿಷಿಕೇಶದಲ್ಲಿ ನಡೆದಿದೆ. ಗಾಯಗೊಂಡಿರುವ ಆಟಗಾರ್ತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಮೂರು ದಿನಗಳಿಂದ ಐಡಿಪಿಎಲ್ ಕ್ರೀಡಾ ಮೈದಾನದಲ್ಲಿ ಅಖಿಲ ಭಾರತ ಮಹಿಳಾ ಹಾಕಿ ಟೂರ್ನಿ ನಡೆಯುತ್ತಿದೆ. ಭಾನುವಾರ ಕೋಲ್ಕತ್ತಾ ಮತ್ತು ಮೀರತ್ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಮೀರತ್ನ ಆಟಗಾರ್ತಿ ಶಿವಾನಿ ಎಂಬಾಕೆ ಕೋಲ್ಕತ್ತಾ ಆಟಗಾರ್ತಿ ಮಮತಾ ಎಂಬುವರಿಗೆ ಹಾಕಿ ಸ್ಟಿಕ್ನಿಂದ ಹೊಡೆದಿದ್ದಾರೆ.
ಹಣಾಹಣಿ ವೇಳೆ ಸ್ಟಿಕ್ ಆಕಸ್ಮಿಕವಾಗಿ ಶಿವಾನಿ ಮುಖಕ್ಕೆ ತಾಗಿದ್ದರಿಂದ ಕೋಪಗೊಂಡು ಮಮತಾ ತೋಳಿಗೆ ಬಲವಾಗಿ ಬಾರಿಸಿದ್ದಾರೆ. ಈ ಘಟನೆ ಸ್ಥಳದಲ್ಲಿ ಕೋಲಾಹಲ ಉಂಟಾಗಿ ಪಂದ್ಯವನ್ನು ಆಯೋಜಕರು ರದ್ದುಗೊಳಿಸಿದ್ದಾರೆ. ಗಾಯಗೊಂಡ ಮಮತಾರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆಂದು ತಿಳಿದು ಬಂದಿದೆ.