ನವದೆಹಲಿ:ದೇಶದ ಯುವ ಜನತೆಯಲ್ಲಿ ಕ್ರೀಡೆಗಳ ಮೇಲೆ ಮೂಡುತ್ತಿರುವ ಉತ್ಸಾಹ ಮೇಜರ್ ಧ್ಯಾನ್ ಚಂದ್ ಅವರಿಗೆ ದೊರೆತ ದೊಡ್ಡ ಗೌರವ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ಮಾಂತ್ರಿಕ ಕೌಶಲ್ಯಗಳ ಮೂಲಕ ಮೇಜರ್ ಧ್ಯಾನ್ ಚಂದ್ ವಿಶ್ವ ಹಾಕಿ ಕ್ರೀಡೆಯ ದಂತಕತೆಯಾಗಿದ್ದಾರೆ. ಅವರು 1928, 1932, 1936ರ ಸತತ 3 ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಇವರ ಕಾಲದಲ್ಲಿ ವಿಶ್ವದಲ್ಲೇ ಭಾರತ ತಂಡ ಹಾಕಿ ಕ್ರೀಡೆಯಲ್ಲಿ ಪ್ರಾಬಲ್ಯ ಸಾಧಿಸಿತ್ತು.
"ಭಾರತ ಹಾಕಿ ತಂಡ ನಾಲ್ಕು ದಶಕಗಳ ನಂತರ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿದೆ. ಒಂದು ವೇಳೆ ಮೇಜರ್ ಧ್ಯಾನ್ ಚಂದ್ ಇಂದು ಇದ್ದಿದ್ದರೆ ಎಷ್ಟು ಸಂತೋಷಪಡುತ್ತಿದ್ದರು ಅನ್ನೋದನ್ನು ನೀವು ಊಹಿಸಿಕೊಳ್ಳಬಹುದು. ಇಂದಿನ ಯುವಕರಲ್ಲಿ ಕ್ರೀಡೆ ಮೇಲಿನ ಪ್ರೇಮವನ್ನು ನಾವು ಕಾಣುತ್ತಿದ್ದೇವೆ. ಕ್ರೀಡೆಗಳ ಮೇಲಿನ ಈ ಉತ್ಸಾಹವು ಅವರಿಗೆ ಸಲ್ಲುವ ದೊಡ್ಡ ಗೌರವ" ಎಂದು ಪ್ರಧಾನಿ ಮೋದಿ ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ನಲ್ಲಿ ಹರ್ಷ ವ್ಯಕ್ತಪಡಿಸಿದರು.