ಟೋಕಿಯೋ: ಭಾರತ ಹಾಗೂ ಬೆಲ್ಜಿಯಂ ನಡುವಿನ ಸೆಮಿಫೈನಲ್ ಪಂದ್ಯ ರೋಚಕ ಘಟ್ಟ ತಲುಪಿದೆ. ಪಂದ್ಯ ಆರಂಭವಾದ ಎರಡನೇ ನೀಮಿಷಕ್ಕೆ ವಿಶ್ವ ಚಾಂಪಿಯನ್ ಬೆಲ್ಜಿಯಂ ತಂಡ ಮೊದಲ ಗೋಲು ಗಳಿಸುವ ಮೂಲಕ ಖಾತೆ ತೆರೆಯಿತು.
ಇದಾದ ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡಿದ ಭಾರತ ತಂಡ 10ನೇ ನೀಮಿಷದಲ್ಲಿ ಭಾರತದ ಹರ್ಮನ್ಪ್ರೀತ್ ಸಿಂಗ್ ಅದ್ಭುತ ಗೋಲು ಗಳಿಸುವ ಮೂಲಕ 1-1 ಸಮಬಲ ಸಾಧಿಸಿತು. ನಂತರ ಈ ಗೋಲಿನ 8 ನಿಮಿಷದ ನಂತರ ನಾಯಕ ಮನ್‌ಪ್ರೀತ್ ಮತ್ತೊಂದು ಗೋಲು ಗಳಿಸುವ ಮೂಲಕ 2-1ರಿಂದ ಭಾರತ ಮುನ್ನಡೆ ಸಾಧಿಸಿತು. ನಂತರ ಇದಕ್ಕೆ ಬೆಲ್ಜಿಯಂ ಕೂಡಾ ದಿಟ್ಟ ಉತ್ತರ ನೀಡಿದ್ದು 30ನೇ ನಿಮಿಷದಲ್ಲಿ ಹ್ಯಾನಿಡ್ರಿಕ್ ಹಿಲ್ಸ್ ಗೋಲು ಗಳಿಸುವ ಮೂಲಕ 2-2ರಿಂದ ಸಮಬಲ ಸಾಧಿಸಿದೆ.
ಭಾರತದ ಪುರುಷರ ತಂಡ ಬ್ರಿಟನ್ ತಂಡವನ್ನು ಕ್ವಾರ್ಟರ್‌ಫೈನಲ್‌ನಲ್ಲಿ 3-1 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ 41 ವರ್ಷಗಳ ಬಳಿಕ ಸೆಮಿಫೈನಲ್‌ಗೆ ಪ್ರವೇಶಿಸಿದ್ದು ಇದೀಗ ಬಲಿಷ್ಠ ಬೆಲ್ಜಿಯಂ ಜೊತೆ ಪೈಪೋಟಿ ನಡೆಸುತ್ತಿದೆ.
ಬೆಲ್ಜಿಯಂ ತಮ್ಮ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಈ ತಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಇಲ್ಲಿಯವರೆಗೂ ಒಂದೇ ಒಂದು ಪಂದ್ಯದಲ್ಲಿ ಸೋಲು ಕಂಡಿಲ್ಲ. ಹಾಗಾಗಿ ಇಂದಿನ ಪಂದ್ಯ ಭಾರತಕ್ಕೆ ಕಠಿಣವಾಗಿದೆ ನಿಜ. ಆದ್ರೆ ಅನುಭವಿಗಳಿರುವ ತಂಡಕ್ಕೆ ಗೆಲುವು ಕಷ್ಟವೇನಲ್ಲ.