ಭುವನೇಶ್ವರ್: ಒಡಿಶಾದ ರೂರ್ಕೆಲಾದಲ್ಲಿ ಭಾರತದಲ್ಲೇ ಅತಿ ದೊಡ್ಡ ಹಾಕಿ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಗುರುವಾರ ಹೇಳಿದ್ದಾರೆ.
ಈ ಸ್ಟೇಡಿಯಂನಲ್ಲಿ ಸುಮಾರು 20,000 ಆಸನಗಳ ವ್ಯವಸ್ಥೆ ಇರಲಿದೆ. ಕಳಿಂಗ ಸ್ಟೇಡಿಯಂ ನಂತರ ಇದು 2023ರ ಪುರುಷರ ಹಾಕಿ ವಿಶ್ವಕಪ್ಗೆ ಎರಡನೇ ಸ್ಥಳವಾಗಲಿದೆ. ಇದು ಬಿಜು ಪಟ್ನಾಯಕ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿ 15 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ ಎಂದು ಪಟ್ನಾಯಕ್ ಮಾಹಿತಿ ನೀಡಿದ್ದಾರೆ.
"ನಾವು ಈಗಾಗಲೇ ಘೋಷಿಸಿದಂತೆ, ಒಡಿಶಾ 2023ಕ್ಕೆ ಮತ್ತೊಮ್ಮೆ ಪ್ರತಿಷ್ಠಿತ ಪುರುಷರ ಹಾಕಿ ವಿಶ್ವಕಪ್ಗೆ ಆತಿಥ್ಯ ವಹಿಸಿಕೊಳ್ಳಲಿದೆ. ಇಡೀ ಟೂರ್ನಮೆಂಟ್ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಆಯೋಜಿಸಲಾಗುವುದು ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಹಾಕಿ ಸ್ಟೇಡಿಯಂನಲ್ಲಿ ನವೀನ್ ಪಟ್ನಾಯಕ್
ಸುದರ್ಗರ್ ಜಿಲ್ಲೆ ಹಾಕಿ ಕ್ರೀಡೆಗೆ ಪವರ್ಹೌಸ್ ಇದ್ದಂತೆ. ಈ ಜಿಲ್ಲೆಯ ತುಂಬಾ ಹಾಕಿ ಆಟಗಾರರು ಭಾರತ ತಂಡವನ್ನು ಪ್ರತಿನಿಧಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದಿಲೀಪ್ ಟಿರ್ಕಿ ಮತ್ತು ಸುನೀತಾ ಲಕ್ರಾ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಹಾಕಿ ಜನಪ್ರಿಯ ಕ್ರೀಡೆಯಾಗಿದೆ. ಇಲ್ಲಿ ಹಾಕಿ ಆಟಗಾರರಿಗೆ ಜಿಲ್ಲೆಯ ಜನರು ನೀಡುವ ಬೆಂಬಲ ವಿಶ್ವದಲ್ಲಿ ಎಲ್ಲೇ ಹೋದರು ಸರಿ ಸಾಟಿಯಾಗದು ಎಂದು ಪಟ್ನಾಯಕ್ ಹೇಳಿದ್ದಾರೆ.
ಭಾರತೀಯ ಹಾಕಿಗೆ ಸುಂದರ್‌ಗರ್ ಕೊಡುಗೆ ಅಪಾರವಾಗಿದೆ. ಹಾಗಾಗಿ ನಾವು ಗೌರವಾರ್ಥವಾಗಿ ರೂರ್ಕೆಲಾದಲ್ಲಿ 20,000 ಆಸನಗಳ ಸಾಮರ್ಥ್ಯವಿರುವ ಹೊಸ ಅಂತಾರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಂಗಣವನ್ನು ನಿರ್ಮಿಸುತ್ತೇವೆ ಎಂದು ಘೋಷಿಸಲು ನಾನು ಬಯಸುತ್ತೇನೆ" ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.