ಲೌಸನ್ನೆ:ಎಫ್‌ಐಹೆಚ್ ವಿಶ್ವ ರ‍್ಯಾಂಕಿಂಗ್ನಲ್ಲಿ ಭಾರತೀಯ ಪುರುಷರ ಹಾಕಿ ತಂಡವು ನಾಲ್ಕನೇ ಸ್ಥಾನಕ್ಕೆ ಏರಿದೆ. 2003ರಿಂದ ಇಲ್ಲಿವರೆಗಿನ ಎಫ್‌ಐಹೆಚ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಮೊದಲ ಬಾರಿಗೆ ಈ ಸ್ಥಾನಕ್ಕೆ ಜಿಗಿತ ಕಂಡಿದೆ. ಇತ್ತೀಚೆಗೆ ಬಿಡುಗಡೆಯಾದ ಪಟ್ಟಿಯಲ್ಲಿ ಭಾರತ ಈ ಸಾಧನೆ ಮಾಡಿ ಗಮನ ಸೆಳೆದಿದೆ.
ಎಫ್‌ಐಹೆಚ್ ಹಾಕಿ ಪ್ರೊ ಲೀಗ್‌ನ ಎರಡನೇ ಆವೃತ್ತಿಯ ಮೊದಲ ಮೂರು ಸುತ್ತುಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಭಾರತ ತಂಡವು ಐದನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ ಐದನೇ ಸ್ಥಾನಕ್ಕೆ ಕುಸಿದಿದ್ದು, ಭಾರತ ನಾಲ್ಕನೇ ಸ್ಥಾನಕ್ಕೇರಿದೆ. ಜನವರಿಯಲ್ಲಿ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಬೆಲ್ಜಿಯಂ ಆಸ್ಟ್ರೇಲಿಯಾವನ್ನು ಸೋಲಿಸಿ ಅಗ್ರಸ್ಥಾನಕ್ಕೇರಿತು. ಆಸ್ಟ್ರೇಲಿಯಾ (2ನೇ) ಮತ್ತು ನೆದರ್ಲ್ಯಾಂಡ್ಸ್ (3ನೇ ಸ್ಥಾನ) ತಂಡಗಳು ಮೊದಲ ಮೂರು ಸ್ಥಾನಗಳಲ್ಲಿ ಇವೆ.
ಜರ್ಮನಿ ಮತ್ತು ಇಂಗ್ಲೆಂಡ್ ಆರನೇ ಮತ್ತು ಏಳನೇ ಸ್ಥಾನದಲ್ಲಿ ಉಳಿದಿದ್ದರೆ, ಕಳೆದ ಮೂರು ಎಫ್‌ಐಹೆಚ್ ಹಾಕಿ ಪ್ರೊ ಲೀಗ್ ಪಂದ್ಯಗಳಲ್ಲಿ ಎರಡು ಜಯ ಸಾಧಿಸಿರುವ ನ್ಯೂಜಿಲ್ಯಾಂಡ್ ಈಗ ಎಂಟನೆ ಸ್ಥಾನದಲ್ಲಿದೆ. ಸ್ಪೇನ್ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.
ಮಹಿಳಾ ಪಟ್ಟಿಯಲ್ಲಿ ಭಾರತ ಒಂಬತ್ತನೆ ಸ್ಥಾನವನ್ನು ಪಡೆದುಕೊಂಡಿದೆ. ನೆದರ್ಲ್ಯಾಂಡ್ ಮೊದಲ ಸ್ಥಾನದಲ್ಲಿದೆ, ಆಸ್ಟ್ರೇಲಿಯಾ, ಅರ್ಜೆಂಟೀನಾ, ಜರ್ಮನಿ ಮತ್ತು ಇಂಗ್ಲೆಂಡ್ ನಂತರದ ಸ್ಥಾನದಲ್ಲಿವೆ.