ನವದೆಹಲಿ:ಭಾರತದ ಹಾಕಿ ತಂಡದ ಅಂಪೈರ್ಗಳ ಮ್ಯಾನೇಜರ್ ವಿರೇಂದ್ರ ಸಿಂಗ್ ಕೋವಿಡ್ 19ಗೆ ಸಂಬಂಧಿಸಿದ ಸಮಸ್ಯೆಯಿಂದ ನಿಧನರಾಗಿದ್ದಾರೆಂದು ಹಾಕಿ ಇಂಡಿಯಾ ತಿಳಿಸಿದೆ.
ವಿರೇಂದ್ರ ಸಿಂಗ್ಗೆ 47 ವರ್ಷ ವಯಸ್ಸಾಗಿತ್ತು. ಅವರು ಸೋಮವಾರ ಉತ್ತರಪ್ರದೇಶದ ಮೀರತ್ನಲ್ಲಿ ಕೊನೆಯುಸಿರೆಳೆದಿದ್ದಾರೆ. ಸಿಂಗ್ ಅಂಪೈರ್ಸ್ ಮ್ಯಾನೇಜರ್ ಆಗಿರುವುದರ ಜೊತೆಗೆ ರೈಲ್ವೆ ಇಲಾಖೆಯಲ್ಲೂ ಖಾಯಂ ಉದ್ಯೋಗಿಯಾಗಿದ್ದರು.
ವಿರೇಂದ್ರ ಆಲ್ ಇಂಡಿಯಾ ಟೂರ್ನಾಮೆಂಟ್ ಮತ್ತು ನ್ಯಾಷನಲ್ ಚಾಂಪಿಯನ್ಶಿಪ್ಗಳಲ್ಲಿ ಅಂಪೈರ್ಗಳ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ಪಂದ್ಯಗಳಿಗೆ ಉತ್ತಮ ಅಂಪೈರ್ಗಳನ್ನು ಆಯ್ಕೆ ಮಾಡುವುದು ಅವರ ಕೆಲಸವಾಗಿತ್ತು.
ವಿರೇಂದ್ರ ಸಿಂಗ್ ಇತ್ತೀಚೆಗೆ ಮುಗಿದ 56ನೇ ಆಲ್ ಇಂಡಿಯಾ ವೀರ್ ಸಿಂಗ್ ಜುದೇವ್ ಮೆಮೊರಿಯಲ್ ಟೂರ್ನಾಮೆಂಟ್ ಮತ್ತು 5ನೇ ಆಲ್ ಇಂಡಿಯಾ ರಾಜಮಾತಾ ವಿಜಯ್ ರಾಜೆಂ ಸಿಂಧಿಯಾ ಮಹಿಳಾ ಟೂರ್ನಾಮೆಂಟ್ನಲ್ಲೂ ಕಾರ್ಯನಿರ್ವಹಿಸಿದ್ದರು.
"ವೀರೇಂದ್ರ ಸಿಂಗ್ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ತೀವ್ರ ದುಃಖಿತರಾಗಿದ್ದೇವೆ. ಅವರು ಹಲವಾರು ಕಾರ್ಯಯೋಜನೆಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಅಂಪೈರ್ ಮತ್ತು ತಾಂತ್ರಿಕ ಅಧಿಕಾರಿಗಳಿಗಾಗಿ ಹಾಕಿ ಇಂಡಿಯಾದ ಉಪಕ್ರಮಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಸಾವು ಅಧಿಕಾರಿ ವರ್ಗಕ್ಕೆ ದಿಗ್ಭ್ರಮೆಗೊಳಿಸಿದೆ. ಈ ದುಃಖದ ಸಮಯದಲ್ಲಿ ನಾವು ಅವರ ಕುಟುಂಬದ ನೋವನ್ನು ಹಂಚಿಕೊಳ್ಳುತ್ತೇವೆ ಮತ್ತು ವಿರೇಂದ್ರ ಅವರ ಕುಟುಂಬಕ್ಕೆ ನಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇವೆ" ಎಂದು ಹಾಕಿ ಇಂಡಿಯಾದ ಅಧ್ಯಕ್ಷ ಜ್ಞಾನೇಂದ್ರೊ ನಿಂಗೋಂಬಮ್ ಸಂತಾಪ ಸೂಚಿಸಿದ್ದಾರೆ.
ಇದನ್ನು ಓದಿ:ಶೇ.10ರಷ್ಟು ಹಣ ಪಡೆದಿದ್ದೀರಾ, ಟೂರ್ನಿ ಮುಗಿದ ಮೇಲೆ ಚಾರ್ಟೆಡ್ ಫ್ಲೈಟ್ ಮೂಲಕ ಕರೆಸಿಕೊಳ್ಳಿ : ಸಿಎಗೆ ಕ್ರಿಸ್ ಲಿನ್ ಮನವಿ