ನವದೆಹಲಿ:ಭಾರತೀಯ ಪುರುಷರ ಹಾಕಿ ತಂಡದ ಆಟಗಾರ ಸುರೇಂದರ್ ಕುಮಾರ್ ಕೈಯಲ್ಲಿ ಬಾವು ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸುರೇಂದರ್ ಕುಮಾರ್ ಮತ್ತು ಇತರ ಐದು ಹಾಕಿ ಆಟಗಾರರು ಈ ತಿಂಗಳ ಆರಂಭದಲ್ಲಿ ಕೋವಿಡ್-19 ಸೋಂಕಿಗೆ ತುತ್ತಾಗಿದ್ದರು. ನಾಯಕ ಮನ್‌ಪ್ರೀತ್ ಸಿಂಗ್, ಜಸ್ಕರಣ್ ಸಿಂಗ್, ವರುಣ್ ಕುಮಾರ್, ಗೋಲ್ ಕೀಪರ್ ಕ್ರಿಶನ್ ಬಹದ್ದೂರ್ ಪಾಠಕ್ ಮತ್ತು ಮಂದೀಪ್ ಸಿಂಗ್ ಅವರೊಂದಿಗೆ ಸುರೇಂದರ್ ಅವರನ್ನು ಸೋಮವಾರ ಕೋವಿಡ್ -19 ನಿಂದ ಚೇತರಿಸಿಕೊಂಡ ನಂತರ ಬೆಂಗಳೂರಿನ ಎಸ್‌ಎಸ್ ಸ್ಪರ್ಶ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
ಆದರೆ, ಸುರೇಂದರ್ ಅವರ ಕೈಯಲ್ಲಿ ಊತ ಕಾಣಿಸಿಕೊಂಡಿದ್ದರಿಮದ ಗುರುವಾರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಪ್ರಕಟಣೆಯಲ್ಲಿ ತಿಳಿಸಿದೆ.
ಅವರ ಬಲಗೈನಲ್ಲಿ ರಕ್ತ ಹೆಪ್ಪುಗಟ್ಟಿದೆ ಆದ್ದರಿಂದ ಎರಡು ಮೂರು ದಿನಗಳವರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ, ಈ ಸಮಯದಲ್ಲಿ ಚೇತರಿಸಿಕೊಳ್ಳಲು ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಲಾಗುವುದು ಎಂದು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ತಿಳಿಸಿದೆ. ಅಲ್ಲದೆ ಎಸ್‌ಎಐ ಅಧಿಕಾರಿಗಳು ವೈದ್ಯರೊಂದಿಗೆ ಮಾತುಕತೆ ನಡೆಸಿದ್ದು, ಸುರೇಂದರ್ ಕುಮಾರ್ ಅವರ ಸ್ಥಿತಿ ಸ್ಥಿರವಾಗಿದೆ. ಪ್ರಸ್ತುತ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ ಎಂದು ತಿಳಿಸಿದೆ.