ಕೊಲೊರಾಡೋ : ಭಾರತ ಪುರುಷರ ಹಾಕಿ ತಂಡದ ಮಾಜಿ ಕೋಚ್ ಹರೇಂದ್ರ ಸಿಂಗ್ ಅವರು ಅಮೆರಿಕ ಹಾಕಿ ತಂಡದ ಮುಖ್ಯ ಕೋಚ್ ಆಗಿ ಗುರುವಾರ ನೇಮಕಗೊಂಡಿದ್ದಾರೆ.
ಭಾರತದ ಮಾಜಿ ಆಟಗಾರ ಹರೇಂದ್ರ ಸಿಂಗ್ ಹಾಕಿ ಕ್ರೀಡೆಯಲ್ಲಿ ಆಥ್ಲೀಟ್ ಮತ್ತು ಕೋಚ್ ಆಗಿ 3 ದಶಕಗಳ ಅನುಭವ ಹೊಂದಿದ್ದಾರೆ. ಅವರು ಭಾರತದ ಸೀನಿಯರ್ ಹಾಕಿ ತಂಡಕ್ಕೆ 2017-18ರಲ್ಲಿ ಕೋಚ್ ಆಗಿ ಕಾರ್ಯ ನಿರ್ಹಿಸಿದ್ದರು. ಮಹಿಳಾ ತಂಡಕ್ಕೂ ಸ್ವಲ್ಪ ಸಮಯ ತರಬೇತಿ ನೀಡಿದ್ದರು. ಇದೀಗ 2021ರ ಟೋಕಿಯೋ ಒಲಿಂಪಿಕ್ಸ್‌ಗೆ ಸಿದ್ಧವಾಗಿರುವ ಯುಎಸ್‌ಎ ಹಾಕಿ ತಂಡವನ್ನು ಸಿಂಗ್ ಮುನ್ನಡೆಸಲಿದ್ದಾರೆ.
"ಹ್ಯಾರಿ(ಹರೇಂದ್ರ) ಅವರನ್ನು ಯುಎಸ್ಎ ಫೀಲ್ಡ್ ಹಾಕಿ ತಂಡಕ್ಕೆ ಸೇರಿಸಿಕೊಂಡಿರುವುದಕ್ಕೆ ಮತ್ತು ನಮ್ಮ ಪುರುಷರ ತಂಡವನ್ನು ಮುನ್ನಡೆಸಲಿರುವುದಕ್ಕೆ ನಾವು ರೋಮಾಂಚನಗೊಂಡಿದ್ದೇವೆ. ಕೋವಿಡ್ 19ನಿಂದ ಕ್ರೀಡೆ ಸ್ಥಗಿತಗೊಳ್ಳುವುದಕ್ಕಿಂತ ಮುನ್ನ ಯುಎಸ್ ಪುರುಷರ ರಾಷ್ಟ್ರೀಯ ತಂಡವು ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ. ಈಗ ಯುಎಸ್ ಪುರುಷರ ರಾಷ್ಟ್ರೀಯ ತಂಡದ ಉನ್ನತೀಕರಣಕ್ಕೆ ಹ್ಯಾರಿಯಂತಹ ಸಾಮರ್ಥ್ಯ ಮತ್ತು ಅನುಭವವುಳ್ಳ ತರಬೇತುದಾರರೊಂದಿಗೆ ಮುನ್ನಡೆಯುವುದಕ್ಕೆ ನಾವು ಉತ್ಸುಕರಾಗಿದ್ದೇವೆ" ಎಂದು ಯುಎಸ್ಎ ಫೀಲ್ಡ್ ಹಾಕಿಯ ಕಾರ್ಯನಿರ್ವಾಹಕ ನಿರ್ದೇಶಕ ಸೈಮನ್ ಹೊಸ್ಕಿನ್ಸ್ ಹೇಳಿದ್ದಾರೆ.