ಲಾ ಬೊಂಬೊನೆರಾ: ಅರ್ಜೆಂಟೀನಾದ ಪ್ರೈಮೆರಾ ಡಿವಿಸನ್ನ ಪಂದ್ಯದಲ್ಲಿ ಬೋಕಾ ಜೂನಿಯರ್ಸ್ ತಂಡ ಮರಡೋನಾಗೆ ಭಾವನಾತ್ಮಕ ಗೌರವ ಸಲ್ಲಿಸಿದೆ. ಈ ವೇಳೆ ತಮ್ಮ ತಂದೆಯ ಜೊತೆ ಪಂದ್ಯ ವೀಕ್ಷಿಸುವ ವೇಳೆ ಕುಳಿತುಕೊಳ್ಳುತ್ತಿದ್ದ ಬಾಕ್ಸ್ನಲ್ಲಿ ಏಕಾಂಗಿಯಾಗಿ ಕುಳಿತಿದ್ದ ಮರಡೋನಾ ಮಗಳು ಡಾಲ್ಮಾ ಬೋಕಾ ತಂಡದ ಗೌರವ ಸಮರ್ಪಣೆ ನೋಡಿ ಕಣ್ಣೀರಿಟ್ಟಿದ್ದಾರೆ.
ನ್ಯೂವೆಲ್‌ನ ಓಲ್ಡ್ ಬಾಯ್ಸ್ ಹಾಗೂ ಬೋಕಾ ಜೂನಿಯರ್ಸ್ ತಂಡಗಳು ಕೋಪಾ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಈ ಎರಡೂ ಮರಡೋನಾ ಅವರು ಆಡಿರುವ ತಂಡಗಳಾಗಿದ್ದು, ಈ ಪಂದ್ಯದಲ್ಲಿ ಬೋಕಾ ಜೂನಿಯರ್ಸ್ ತಂಡದ ಎಲ್ಲಾ ಆಟಗಾರರು ಮರಡೋನಾ ಅವರ ಹೆಸರಿರುವ ಜರ್ಸಿ ಧರಿಸುವ ಮೂಲಕ ಲೆಜೆಂಡ್ಗೆ ಗೌರವ ಸಮರ್ಪಿಸಿದರು.
ಬೋಕಾ ಜೂನಿಯರ್ಸ್ ತಂಡದಿಂದ ಮರಡೋನಾಗೆ ಗೌರವ ಈ ವೇಳೆ ಬೋಕಾ ತಂಡದ ಎಡ್ವಿನ್ ಕಾರ್ಡೋನಾ 12ನೇ ನಿಮಿಷದಲ್ಲಿ ಗೋಲು ಗಳಿಸುತ್ತಿದ್ದಂತೆ ಮರಡೋನಾ ಅವರ ಹೆಸರಿರುವ ಬಾಕ್ಸ್ನತ್ತ ತಿರುಗಿ ಸಂಭ್ರಮ ವ್ಯಕ್ತಪಡಿಸಿದರು. ಈ ವೇಳೆ ಡಾಲ್ಮಾ ತಮ್ಮ ತಂದೆಗೆ ಬೋಕಾ ಆಟಗಾರರು ನೀಡಿದ ಗೌರವ ನೋಡಿ, ಧನ್ಯವಾದ ಅರ್ಪಿಸಿ ಕಣ್ಣೀರಿಟ್ಟರು. ಇದೇ ಕ್ರೀಡಾಂಗಣದಲ್ಲಿ ಡಾಲ್ಮಾ ಮತ್ತು ಮರಡೋನಾ ಹಲವಾರು ಪಂದ್ಯಗಳನ್ನು ಒಟ್ಟಾಗಿ ವೀಕ್ಷಿಸಿದ್ದರು.
ಡಾಲ್ಮಾ ಕಣ್ಣೀರಿಡುತ್ತಾ ಧನ್ಯವಾದ ತಿಳಿಸುತ್ತಿದ್ದಂತೆ ಪಂದ್ಯದ ಕೊನೆಯಲ್ಲಿ ಬೋಕಾ ತಂಡದ ಎಲ್ಲಾ ಆಟಗಾರರು ಚೆಪ್ಪಾಳೆ ತಟ್ಟುವ ಮೂಲಕ ಡಾಲ್ಮಾರನ್ನು ಶ್ಲಾಘಿಸಿದರು.
1986ರಲ್ಲಿ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ್ದ ಲೆಜೆಂಡರಿ ಫುಟ್ಬಾಲರ್ ಡಿಯಾಗೋ ಮರಡೋನಾ ಬುಧವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.