ವಾಸ್ಕೋ: 7ನೇ ಆವೃತ್ತಿಯ ಐಎಸ್ಎಲ್ನ 17ನೇ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಂಡ 2-0 ಗೋಲುಗಳ ಅಂತರದಿಂದ ಎಸ್ಸಿ ಈಸ್ಟ್ ಬೆಂಗಾಲ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಇದೇ ಮೊದಲ ಬಾರಿಗೆ ಇಂಡಿಯನ್ ಸೂಪರ್ ಲೀಗ್ಗೆ ಅವಕಾಶ ಪಡೆದುಕೊಂಡಿರುವ 100 ವರ್ಷಗಳ ಇತಿಹಾಸವಿರುವ ಈಸ್ಟ್ ಬೆಂಗಾಲ್ ತಂಡ ತನ್ನ ಮೊದಲ ಆವೃತ್ತಿಯಲ್ಲೇ ನೀರಸ ಪ್ರದರ್ಶನ ಮುಂದುವರಿಸಿದೆ. ಆಡಿರುವ ಮೂರು ಪಂದ್ಯಗಳಲ್ಲೂ ಸೋಲು ಕಾಣುವ ಮೂಲಕ ಐಎಸ್ಎಲ್ನಲ್ಲಿ ದಯನೀಯ ವೈಫಲ್ಯ ಅನುಭವಿಸಿದೆ
ಶನಿವಾರ ನಡೆದ ಪಂದ್ಯದಲ್ಲಿ ನಾರ್ತ್ಈಸ್ಟ್ ತಂಡದ ಸರ್ ಚಂದ್ರ ಸಿಂಗ್ 33ನೇ ನಿಮಿಷದಲ್ಲಿ ಗೋಲುಗಳಿಸಿ ಯುನೈಟೆಡ್ ಮುನ್ನಡೆ ಸಾಧಿಸಲು ನೆರವಾದರು. ನಂತರ ರೊಚಾರ್ಝೆಲಾ ಹೆಚ್ಚುವರಿ ಸಮಯ(90_1)ದಲ್ಲಿ ಮತ್ತೊಂದು ಗೋಲು ದಾಖಲಿಸಿ ನಾರ್ತ್ ಈಸ್ಟ್ 2-0 ಅಂತರದಿಂದ ಜಯ ಸಾಧಿಸಲು ನೆರವಾದರು.
ಈ ಗೆಲುವಿನ ಮೂಲಕ ಯುನೈಟೆಡ್ 4 ಪಂದ್ಯಗಳಿಂದ 2 ಗೆಲುವು ಮತ್ತು 2 ಸೋಲಿನೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಈಸ್ಟ್ ಬೆಂಗಾಲ್ ಆಡಿದ ಮೂರು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.