ನವದೆಹಲಿ: ಎರಡು ದಿನಗಳ ಹಿಂದೆಯಷ್ಟೇ ಇಟಲಿಯ ಜುವೆಂಟಸ್ ಕ್ಲಬ್ ತೊರೆದು ಮ್ಯಾಂಚೆಸ್ಟರ್ ಯುನೈಟೆಡ್ ಸೇರಿರುವ ಪೋರ್ಚುಗಲ್ನ ಖ್ಯಾತ ಫುಟ್ಬಾಲ್ ತಾರೆ ಕ್ರಿಶ್ಚಿಯಾನೋ ರೊನಾಲ್ಡೊ ವೇತನ ಬಹಿರಂಗಗೊಂಡಿದೆ. ವರದಿಗಳ ಪ್ರಕಾರ, ಅವರು ವಾರಕ್ಕೆ 4,38,000 ಪೌಂಡ್ಸ್ (4,85,60,770.42 ರೂಪಾಯಿ) ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಆಗಸ್ಟ್ 27ರಂದು ಯುನೈಟೆಡ್ ಕ್ಲಬ್ಗೆ 12 ವರ್ಷಗಳಿಂದ ಮರಳಿರುವ ರೊನಾಲ್ಡೊ ಇದೀಗ ಕ್ಲಬ್ನಲ್ಲೇ ಅತ್ಯಧಿಕ ವೇತನ ಪಡೆಯುವ ಆಟಗಾರನಾಗಿದ್ದಾರೆ. ರೊನಾಲ್ಡೊಗೂ ಮೊದಲು ಡೇವಿಡ್ ಡಿ ಗಿಯಾ ವಾರಕ್ಕೆ 3,75,000 (3,79,38,101.89 ರೂ) ಪೌಂಡ್ಸ್ ಪಡೆಯುತ್ತಿದ್ದರು. ಇವರ ನಂತರ 2ನೇ ಸ್ಥಾನದಲ್ಲಿ ಫ್ರಾನ್ಸ್ನ ಪಾಲ್ ಪೊಗ್ಬಾ 2,90,000 (2.9 ಕೋಟಿ ರೂ) ಪೌಂಡ್ಸ್ ಪಡೆಯುತ್ತಿದ್ದರು. ಇದೀಗ ರೊನಾಲ್ಡೊ ಇವರೆಲ್ಲರನ್ನು ಮೀರಿಸಿ ಅಧಿಕ ವೇತನ ಪಡೆಯುವ ಕ್ಲಬ್ ಆಟಗಾರನಾಗಿದ್ದಾರೆ.
ಫುಟ್ಬಾಲ್ ಜಗತ್ತಿನಲ್ಲಿ ಗರಿಷ್ಠ ವೇತನ ಪಡೆಯುವ ಆಟಗಾರ ಎಂದರೆ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ. ಅವರು ತಮ್ಮ ನೂತನ ಕ್ಲಬ್ ಪ್ಯಾರೀಸ್ ಜೇಂಟ್ಸ್ ಜರ್ಮೈನ್ನಿಂದ ವಾರಕ್ಕೆ 9,60,000 ಪೌಂಡ್ಸ್(9.7 ಕೋಟಿ ರೂ) ಪಡೆಯುತ್ತಿದ್ದಾರೆ.
ಬ್ರೆಜಿಲ್ನ ಸ್ಟಾರ್ ನೇಮರ್ ಕೂಡ ಪಿಎಸ್ಜಿಯಲ್ಲೇ ಇದ್ದು, ಅವು ವಾರಕ್ಕೆ 6,06,000 ಪೌಂಡ್ಸ್ (6.1 ಕೋಟಿ ರೂ) ಪಡೆಯುತ್ತಿದ್ದಾರೆ. ಅಟ್ಲಾಂಟಿಕೋ ಮ್ಯಾಡ್ರಿಡ್ನ ಲೂಯಿಸ್ ಸ್ವಾರೆಜ್ 5,75,000 ಪೌಂಡ್ಸ್ (5.8 ಕೋಟಿ ರೂ), ಬಾರ್ಸಿಲೋನಾದ ಆಂಟೊಯಿನ್ ಗ್ರೀಜ್ಮನ್ 5,75,000 ಪೌಂಡ್ಸ್ (5.8 ಕೋಟಿ ರೂ) ಪಡೆದು ರೊನಾಲ್ಡೊಗಿಂತ ಮುಂದಿದ್ದಾರೆ. ರೊನಾಲ್ಡೊ ಜುವೆಂಟಸ್ನಲ್ಲಿ 9,00,000 ಪೌಂಡ್ಸ್ ಪಡೆಯುತ್ತಿದ್ದರು. ಇದೇ ಕಾರಣಕ್ಕೆ ಜುವೆಂಟಸ್ ರೊನಾಲ್ಡೊ ಜೊತೆಗೆ ಒಪ್ಪಂದವನ್ನು ಮುಂದುವರಿಸದೆ 130 ಕೋಟಿ ರೂ ಪಡೆದು ಮ್ಯಾಂಚೆಸ್ಟರ್ ಯುನೈಟೆಡ್ಗೆ ವರ್ಗಾವಣೆ ಮಾಡಿಕೊಂಡಿತ್ತು.
ಇದನ್ನೂ ಓದಿ:12 ವರ್ಷಗಳ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್ ಮರಳಿದ ಕ್ರಿಶ್ಚಿಯಾನೋ ರೊನಾಲ್ಡೊ