ಬೆಂಗಳೂರು:ಇಂದು ನಡೆಯಲಿರುವ ಬೆಂಗಳೂರು ಎಫ್ಸಿ ಮತ್ತು ಕೇರಳ ತಂಡದ ನಡುವಿನ ಐಎಸ್ಎಲ್ ಪಂದ್ಯ ವೀಕ್ಷಣೆಗೆ ತುಂಬು ಗರ್ಭಿಣಿಯೊಬ್ಬರು ಮಾಡಿದ ಮನವಿಗೆ ಬೆಂಗಳೂರು ಫುಟ್ಬಾಲ್ ಕ್ಲಬ್ ಸ್ಪಂದಿಸಿ ಮಾನವೀಯತೆ ಮೆರೆದಿದೆ.
ಬೆಂಗಳೂರು ಮೂಲದ ಮೇಘನಾ ನಾಯರ್ ಎಂಬ ಮಹಿಳೆ ಬಿಎಫ್ಸಿ ತಂಡದ ಅಪ್ಪಟ ಅಭಿಮಾನಿಯಾಗಿದ್ದಾರೆ. ಇಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಬೆಂಗಳೂರು ಮತ್ತು ಕೇರಳಾ ಬ್ಲಾಸ್ಟರ್ಸ್ ನಡುವಿನ ಪಂದ್ಯ ನೋಡುವ ಆಸೆ ಹೊಂದಿದ್ದರು. ಗರ್ಭಿಣಿಯಾದ ಕಾರಣ ಬಿಸಿ ನೀರು ಮತ್ತು ಕೆಲವು ಔಷಧಿಗಳನ್ನ ಸೇವಿಸುವುದು ಅನಿವಾರ್ಯ.
ಆದರೆ, ಭದ್ರತಾ ದೃಷ್ಟಿಯಿಂದ ಅವುಗಳನ್ನ ಕ್ರೀಡಾಂಗಣಕ್ಕೆ ತರುವಂತಿಲ್ಲ. ಈ ಬಗ್ಗೆ ಟ್ವೀಟ್ ಮಾಡಿದ್ದ ಮೇಘನಾ ನನಗೆ ಮೈದಾನಕ್ಕೆ ಬಿಸಿ ನೀರು ಮತ್ತು ಔಷಧಿಗಳನ್ನ ತರಲು ಅನುಮತಿ ಕೊಡಿಸುವಂತೆ ಮನವಿ ಮಾಡಿದ್ದರು.
ಅಭಿಮಾನಿಗಳೇ ನಮ್ಮನೇ ದೇವ್ರು ಎಂದು ಸದಾ ಟ್ವಿಟರ್ನಲ್ಲಿ ಹೇಳಿಕೊಳ್ಳುತ್ತಿದ್ದ ಬಿಎಫ್ಸಿ, ಅಭಿಮಾನಿಯ ಮನವಿಗೆ ಸ್ಪಂದಿಸಿದೆ. ಮೇಘನಾ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಬಿಎಫ್ಸಿ, ಮಾಲೀಕರು ಕುಳಿತುಕೊಳ್ಳುವಲ್ಲಿಯೇ ನಿಮಗೆ ಮ್ಯಾಚ್ ನೋಡಲು ಅವಕಾಶ ನೀಡಲಾಗುವುದು. ಅಲ್ಲಿ ಬಿಸಿ ನೀರು ಮತ್ತು ಎಲ್ಲಾ ರೀತಿಯ ಸೌಲಭ್ಯಗಳಿದೆ ಎಂದು ತಿಳಿಸಿದೆ.
ಬಿಎಫ್ಸಿ ತನ್ನ ಮನವಿಗೆ ಸ್ಪಂದಿಸಿದ್ದಕ್ಕೆ ಮೇಘನಾ ಸಂತಸ ವ್ಯಕ್ತಪಡಿಸಿದ್ದಾರೆ. ನಿಮ್ಮಿಂದ ಈ ಉತ್ತರ ನಿರೀಕ್ಷಿಸಿರಲಿಲ್ಲ. ನಿಮ್ಮ ಔದಾರ್ಯಕ್ಕೆ ಧನ್ಯವಾದಗಳು ಎಂದಿದ್ದಾರೆ.