ಬ್ಯೂರನ್ ಐರಿಸ್: ಗೋಲ್ಡನ್ ಬಾಯ್, ಮಾಪ್ಟಾಪ್, ಕಾಸ್ಮಿಕ್ ಕೈಟ್, ಗಾಡ್ ಎಂಬ ಅಡ್ಡ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಫುಟ್ಬಾಲ್ ದಿಗ್ಗಜ ಅರ್ಜೆಂಟೀನಾದ ಡಿಯೇಗೋ ಅರ್ಮಾಂಡೋ ಮರಡೋನಾ ಬುಧವಾರ ರಾತ್ರಿ ಹೃದಯಾಘಾತದಿಂದ ನಿಧರಾಗಿದ್ದಾರೆ.
ಮರಡೋನಾ ಅಕ್ಟೋಬರ್ 30 1960ರಲ್ಲಿ ಬ್ಯೂನಸ್ ಐರಿಸ್ನ ವಿಲ್ಲ ಫಿಯಾರಿಟೊ ಎಂಬಲ್ಲಿ ತಮ್ಮ ಪೋಷಕರ 8 ಮಕ್ಕಳಲ್ಲಿ 5ನೇಯವರಾಗಿ ಜನಸಿದ್ದರು. ಅರ್ಜೆಂಟೀನಾದ ನೆಚ್ಚಿನ ಮಗ, ವಿಶ್ವದ ಸಾರ್ವಕಾಲಿಕ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದ ಮರಡೋನಾ ಬುಧವಾರ ತಮ್ಮ 60ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು ಬ್ಯೂನಸ್ ಐರಿಸ್ನ ಬೀದಿಗಳಲ್ಲಿ ಬೆಳೆದು ಒಬ್ಬ ಪರಿಪೂರ್ಣ ಫುಟ್ಬಾಲ್ ಆಟಗಾರ ಎನಿಸಿಕೊಂಡಿದ್ದರು. ಇವರು 1986 ವಿಶ್ವಕಪ್ನಲ್ಲಿ ನಾಯಕನಾಗಿ ಅರ್ಜಿಂಟೀನಾಕ್ಕೆ 2ನೇ ಫಿಫಾ ವಿಶ್ವಕಪ್ ತಂದುಕೊಟ್ಟಿದ್ದರು.
3ನೇ ವರ್ಷದ ಜನ್ಮದಿನದ ಉಡುಗೊರೆಯಾಗಿ ಫುಟ್ಬಾಲ್ ಗಿಫ್ಟ್ ಪಡೆದಿದ್ದ ಮರಡೋನಾ ನಂತರ ತಮ್ಮ ಜೀವನವನ್ನೇ ಅದಕ್ಕೆ ಅರ್ಪಿಸಿಕೊಂಡರು. ಬಾಲ್ಯದಲ್ಲೇ ಫುಟ್ಬಾಲ್ ಆಟದ ಹುಚ್ಚನಾಗಿದ್ದ ಅವರು 8ನೇ ವರ್ಷದಲ್ಲಿ ಗೆಳೆಯರ ಜೊತೆಗೆ ಫುಟ್ಬಾಲ್ ಆಡುತ್ತಿದ್ದ ವೇಳೆ ಸ್ಥಳೀಯ ಫುಟ್ಬಾಲ್ ಕ್ಲಬ್‌ನ ಸದಸ್ಯರೊಬ್ಬರ ಕಣ್ಣಿಗೆ ಬಿದ್ದರು. ತಮ್ಮ 14ನೇ ವಯಸ್ಸಿನಲ್ಲೇ ಅರ್ಜಿಂಟೀನೋಸ್ ಕ್ಲಬ್ ಪರ ಒಪ್ಪಂದ ಮಾಡಿಕೊಳ್ಳುವ ಮೂಲಕ ಮರಡೋನಾ ಫುಟ್ಬಾಲ್ ಪಯಣ ಆರಂಭಿಸಿದರು. ನಂತರ 16ನೇ ವಯಸ್ಸಿನಲ್ಲಿ ಫರ್ಸ್ ಡಿವಿಸನ್ ಪಂದ್ಯಕ್ಕೆ ಪದಾರ್ಪಣೆ ಮಾಡಿದರು.
ಮರಡೋನಾ ರಾಷ್ಟ್ರೀಯ ತಂಡಕ್ಕಾಗಿ ಆಡಿದ ಅತ್ಯಂತ ಕಿರಿಯ ಅರ್ಜೆಂಟೀನಾ ಆಟಗಾರ ಎನಿಸಿಕೊಂಡಿದ್ದರು. ಹಂಗೇರಿ ವಿರುದ್ಧ ಸೌಹಾರ್ದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಸಾಕರ್ಗೆ ಪಾದಾರ್ಪಣೆ ಮಾಡಿದರು. ಅವರ ವಯಸ್ಸಿನ ನಿಯಮದಿಂದ ಹಾಗೂ ಕೋಚ್ ಬೆಂಬಲವಿಲ್ಲದ್ದರಿಂದ 1978 ರ ವಿಶ್ವಕಪ್ ವಿಜೇತ ತಂಡದಿಂದ ಹೊರಗುಳಿದರಾದೂ, ಅವರು ನಂತರ ವರ್ಷದಲ್ಲೇ ಅಂಡರ್ 20 ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದರು.
ನಂತರ ಹಿಂತಿರುಗಿ ನೋಡದ ಮರಡೋನಾ 1979ರಲ್ಲಿ ವರ್ಷದ ದಕ್ಷಿಣ ಅಮೆರಿಕಾ ಆಟಗಾರ ಎಂಬ ಪ್ರಶಸ್ತಿ ತಮ್ಮದಾಗಿಸಿಕೊಂಡರು. 1986ರ ವಿಶ್ವಕಪ್ನಲ್ಲಿ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದರು. 1977ರಿಂದ 1994ರವರೆಗೆ ಅವರು 91 ಪಂದ್ಯಗಳನ್ನಾಡಿದ್ದು, 34 ಗೋಲು ಗಳಿಸಿದ್ದಾರೆ. 1982ರಲ್ಲಿ ದಾಖಲೆಯ ಬೆಲೆಗೆ ಬಾರ್ಸಿಲೋನಾ ಕ್ಲಬ್ ಸೇರಿದ ಅವರು, ನಂತರ ನಪೋಲಿ, ಸೆವಿಲ್ಲಾ ಕ್ಲಬ್ಗಳನ್ನು ಪ್ರತಿನಿಧಿಸಿದ್ದರು. ಒಟ್ಟಾರೆ 490 ಪಂದ್ಯಗಳನ್ನಾಡಿದ್ದು, 259 ಗೋಲು ಸಿಡಿಸಿದ್ದಾರೆ.
ವಿವಾದ:
ಫುಟ್ಬಾಲ್ ಜಗತ್ತಿನಲ್ಲಿ ಮಿಂಚಿದ್ದರೂ ಮರಡೋನಾ ವಿವಾಧಗಳಿಂದ ಹೊರೆತಾಗಿಲ್ಲ. ಮಾಧಕ ವ್ಯಸನಿಯಾಗಿದ್ದ ಅವರು 1991ರಲ್ಲಿ ಡ್ರಗ್ಸ್ ಸೇವಿಸಿ 15 ತಿಂಗಳ ಕಾಲ ನಿಷೇಧಕ್ಕೊಳಗಾಗಿದ್ದರು. ಮತ್ತೆ 1993ರಲ್ಲಿ ಮತ್ತೊಂದು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದರು.1994ರಲ್ಲಿ ಡೂಪಿಂಗ್ ಟೆಸ್ಟ್ನಲ್ಲಿ ಅನುತ್ತೀರ್ಣರಾದರು ಮನೆ ಸೇರಿದರು. 1994ರಲ್ಲಿ ಕ್ಲಬ್ ಪಂದ್ಯ ಆಡುವಾಗ ಮತ್ತೊಂದು ಬಾರಿ ಡೂಪಿಂಗ್ನಲ್ಲಿ ಸಿಕ್ಕಿ ಬೀಳುವ ಮೂಲಕ ತಮ್ಮ 37ನೇ ಜನ್ಮದಿನದಂದೇ ವೃತ್ತಿ ಬದುಕಿಗೆ ಗುಡ್ ಬೈ ಹೇಳಿದರು.