ಕರ್ನಾಟಕ

karnataka

ETV Bharat / sports

ಅಧಿಕೃತವಾಗಿ ಫ್ರೆಂಚ್ ಕ್ಲಬ್ ಸೇರಿದ ಮೆಸ್ಸಿ.. ಪ್ಯಾರಿಸ್​ನ ಹೊಸ ವಜ್ರ ಎಂದ ಪಿಎಸ್​ಜಿ

ವಾರದ ಹಿಂದೆ ಬಾರ್ಸಿಲೋನಾ ಕ್ಲಬ್​ ತೊರೆದಿರುವ ಲಿಯೋನಲ್ ಮೆಸ್ಸಿ, ಫ್ರಾನ್ಸ್​ನ ಪ್ಯಾರಿಸ್​ ಸೇಂಟ್​ ಜರ್ಮೈನ್ ಕ್ಲಬ್​ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಪಿಎಸ್​ಜಿ ಕ್ಲಬ್​​ ಖಚಿತಪಡಿಸಿದೆ.

Messi Signs Two-Year Contract
ಅಧಿಕೃತವಾಗಿ ಫ್ರೆಂಚ್ ಕ್ಲಬ್ ಸೇರಿದ ಮೆಸ್ಸಿ

By

Published : Aug 11, 2021, 2:03 PM IST

ಪ್ಯಾರಿಸ್ :ಸುದೀರ್ಘ 21 ವರ್ಷಗಳ ಬಳಿಕಬಾರ್ಸಿಲೋನಾ ಕ್ಲಬ್​ ತೊರೆದಿರುವ ಅರ್ಜೆಂಟೀನಾ ಫುಟ್​ಬಾಲರ್​ ಲಿಯೋನಲ್ ಮೆಸ್ಸಿ ಅಧಿಕೃತವಾಗಿ ಫ್ರಾನ್ಸ್​ನ ಪ್ಯಾರಿಸ್​ ಸೇಂಟ್​ ಜರ್ಮೈನ್ ಕ್ಲಬ್​ಗೆ (ಪಿಎಸ್​ಜಿ) ಸೇರ್ಪಡೆಯಾಗಿದ್ದಾರೆ.

ಹೆಚ್ಚುವರಿ ಒಂದು ವರ್ಷ ಆಯ್ಕೆಯೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಮೆಸ್ಸಿ ಸಹಿ ಹಾಕಿರುವುದಾಗಿ ಫ್ರೆಂಚ್ ಕ್ಲಬ್ ಪಿಎಸ್​ಜಿ ಮಂಗಳವಾರ ಖಚಿತಪಡಿಸಿದೆ. ಬಾರ್ಸಿಲೋನಾ ಕ್ಲಬ್​ನಲ್ಲಿ ನಂಬರ್ 10 ರ ಜೆರ್ಸಿ ಧರಿಸುತ್ತಿದ್ದ 34 ವರ್ಷದ ಮೆಸ್ಸಿ, ಇನ್ಮುಂದೆ ಫ್ರೆಂಚ್​ ಕ್ಲಬ್​ನಲ್ಲಿ 30 ನಂಬರ್​ನ ಜೆರ್ಸಿ ಧರಿಸಲಿದ್ದಾರೆ.

ತಾನು ಪಿಎಸ್​ಜಿ ಕ್ಲಬ್ ಸೇರ್ಪಡೆಯಾಗಿರುವ ಬಗ್ಗೆ ಮೆಸ್ಸಿ ಅಧಿಕೃತ ಹೇಳಿಕೆ ನೀಡಿದ್ದು, ಪ್ಯಾರಿಸ್​ ಸೇಂಟ್​ ಜರ್ಮೈನ್ ಕ್ಲಬ್​ನಲ್ಲಿ ನನ್ನ ವೃತ್ತಿಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ಉತ್ಸುಕನಾಗಿದ್ದೇನೆ. ಈ ಕ್ಲಬ್​ನ ಎಲ್ಲವೂ ನನ್ನ ಫುಟ್ಬಾಲ್ ಉದ್ದೇಶಗಳಿಗೆ ಹೊಂದಿಕೆಯಾಗುತ್ತದೆ. ಈ ತಂಡ ಮತ್ತು ಕೋಚಿಂಗ್ ಸಿಬ್ಬಂದಿ ಎಷ್ಟು ಪ್ರತಿಭಾವಂತರು ಎಂಬುದು ನನಗೆ ತಿಳಿದಿದೆ ಎಂದು ಪಿಎಸ್​ಜಿಯ ಅಧಿಕೃತ ವೆಬ್​ಸೈಟ್​ನಲ್ಲಿ ಮೆಸ್ಸಿ ಮಾಹಿತಿ ನೀಡಿದ್ದಾರೆ.

ಅಭಿಮಾನಿಗಳಿಗೆ ನಾನು ಹೊಸದನ್ನು ಕೊಡಲು ಪ್ರಯುತ್ನಿಸುತ್ತೇನೆ. ಪಾರ್ಕ್ ಡೆಸ್ ಪ್ರಿನ್ಸಸ್‌ನಲ್ಲಿರುವ ಪಿಚ್‌ಗೆ ಕಾಲಿಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಮೆಸ್ಸಿ ಹೇಳಿದ್ದಾರೆ.

ಅದ್ಧೂರಿ ಸ್ವಾಗತ

ಮಂಗಳವಾರ ಫ್ರಾನ್ಸ್ ರಾಜಧಾನಿ ಪ್ಯಾರಿಸ್​ಗೆ​ ಮೆಸ್ಸಿ ಆಗಮಿಸಿದಾಗ ಪಿಎಸ್‌ಜಿಯ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು. ಪ್ಯಾರಿಸ್​ನ ಉತ್ತರದಲ್ಲಿರುವ ಲೆ ಬೌರ್ಗೆಟ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೆಸ್ಸಿಯನ್ನು ಅಭಿಮಾನಿಗಳು ಬರಮಾಡಿಕೊಂಡರು.

ವಿಮಾನ ನಿಲ್ದಾಣ ಮಾತ್ರವಲ್ಲದೆ ಪಾರ್ಕ್ ಡೆಸ್ ಪ್ರಿನ್ಸೆಸ್ ಸುತ್ತಮುತ್ತ ಹಾಗೂ ಮೆಸ್ಸಿ ಕುಟುಂಬ ತಂಗಲಿರುವ ನಗರದ ಪ್ಲಶ್ ಹೋಟೆಲ್ ಬಳಿ ಕೂಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಮೆಸ್ಸಿ ಜೊತೆಗೆ ಪತ್ನಿ ಆಂಟೊನೆಲ್ಲಾ ಮತ್ತು ಅವರ ಮೂವರು ಮಕ್ಕಳು ಇದ್ದರು.

ಪ್ಯಾರಿಸ್​ನ ಹೊಸ ವಜ್ರ ಎಂದ ಪಿಎಸ್​ಜಿ

ಪಿಎಸ್​ಜಿ ಸೇರಿರುವ ಮೆಸ್ಸಿ ಇಂದಿನಿಂದಲೇ ಪ್ರಾಕ್ಟಿಸ್ ಪ್ರಾರಂಭಿಸಿದ್ದಾರೆ. ಮೆಸ್ಸಿ ಆಗಮನದೊಂದಿಗೆ ಪಿಎಸ್​ಜಿ ಕ್ಲಬ್​ಗೆ ದೊಡ್ಡ ಬಲ ಬಂದಿದೆ. ಯಾಕೆಂದರೆ ಮೆಸ್ಸಿ ವಿಶ್ವದ ಪ್ರಸಿದ್ಧ ಫುಟ್ಬಾಲ್ ತಾರೆಗಳಲ್ಲಿ ಒಬ್ಬರು. ಮೆಸ್ಸಿ ಆಗಮನದ ಬಗ್ಗೆ ಟ್ವೀಟ್ ಮಾಡಿರುವ ಪಿಎಸ್​ಜಿ, ಪ್ಯಾರಿಸ್​ನಲ್ಲಿ ಹೊಸ ವಜ್ರ, ಪಿಎಸ್​ಜಿ X ಮೆಸ್ಸಿ ಎಂದು ಬರೆದುಕೊಂಡಿದೆ.

ಪಿಎಸ್​ಜಿ ಜೊತೆಗಿನ ಎರಡು ವರ್ಷ ಒಪ್ಪಂದದ ಪ್ರಕಾರ ಲಿಯೋನಲ್ ಮೆಸ್ಸಿ ವಾರ್ಷಿಕವಾಗಿ ಸುಮಾರು 35 ಮಿಲಿಯನ್​ ಯೂರೋ (ಸುಮಾರು 305 ಕೋಟಿ ರೂಪಾಯಿ) ಗಳಿಸಲಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details