ಮಾರ್ಗೋವಾ (ಗೋವಾ): ಎಫ್‌ಸಿ ಗೋವಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಡ್ರಾ ಸಾಧಿಸಿದ್ದ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ, ಇಂದು ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿಯನ್ನು ಎದುರಿಸಲಿದೆ.
ಎರಡೂ ತಂಡಗಳು ಹೀರೋ ಇಂಡಿಯನ್ ಸೂಪರ್ ಲೀಗ್ನಲ್ಲಿ ಈಗಾಗಲೇ ಒಂದೊಂದು ಪಂದ್ಯಗಳನ್ನು ಆಡಿವೆ. ಬೆಂಗಳೂರು ಗೋವಾ ವಿರುದ್ಧ ಡ್ರಾ ಸಾಧಿಸಿದ್ರೆ, ಹೈದರಾಬಾದ್ ಎಫ್‌ಸಿ ಒಡಿಶಾ ವಿರುದ್ಧ ಜಯ ಗಳಿಸಿ ಮೇಲುಗೈ ಸಾಧಿಸಿದೆ.
ಹೈದರಬಾದ್ ತಂಡ ಫಟೋರ್ಡಾದಲ್ಲಿ ಬೆಂಗಳೂರು ತಂಡವನ್ನು ಎದುರಿಸಲು ಸಜ್ಜಾಗುತ್ತಿದ್ದು, ಹೈದರಾಬಾದ್ ಕೋಚ್ ಮ್ಯಾನ್ವೆಲ್ ಮಾರ್ಕ್ವೆಜ್ ಒಡಿಶಾ ವಿರುದ್ಧ ತೋರಿದ ಪ್ರದರ್ಶನವನ್ನೇ ಮುಂದುವರೆಸುವ ಗುರಿ ಹೊಂದಿದ್ದಾರೆ. "ಜಯದೊಂದಿಗೆ ಆರಂಭ ಕಾಣುವುದು ಪ್ರಮುಖವಾಗಿದೆ. ಆದರೆ ಬಿಎಫ್‌ಸಿ ಉತ್ತಮ ತಂಡ. ನಾವು ಪ್ರಶಸ್ತಿ ಗೆಲ್ಲಲು ಉತ್ಸುಕವಾಗಿರುವ ತಂಡದ ವಿರುದ್ಧ ಆಡಲಿದ್ದೇವೆ. ಇದು ಅತ್ಯಂತ ಕಠಿಣ ಪಂದ್ಯವಾಗಲಿದೆ" ಎಂದಿದ್ದಾರೆ.
ಹೈದರಾಬಾದ್ ವಿರುದ್ಧ ಬೆಂಗಳೂರು ಅತ್ಯುತ್ತಮ ದಾಖಲೆ ಹೊಂದಿಲ್ಲ. ಎರಡು ಪಂದ್ಯಗಳಲ್ಲಿ ಕೇವಲ ಎರಡು ಗೋಲುಗಳನ್ನು ಗಳಿಸಿದ್ದಾರೆ.
"ಒಡಿಶಾ ವಿರುದ್ಧ ಅವರು ಗೆದ್ದಿರುವ ಪಂದ್ಯವನ್ನು ನೋಡಿದ್ದೇವೆ. ಅವರಲ್ಲಿ ಸಕಾರಾತ್ಮಕ ಅಂಶ ಇರುವುದನ್ನು ತಳ್ಳಿ ಹಾಕುವಂತಿಲ್ಲ. ಹೆಚ್ಚು ಪಂದ್ಯಗಳನ್ನು ಗೆಲ್ಲವ ಉತ್ಸಾಹ, ಸೋಲಬಾರದೆಂಬ ಛಲ ಹೊಂದಿರುವ ತಂಡದಿಂದ ನಾವು ಕಠಿಣ ಸವಾಲನ್ನು ನಿರೀಕ್ಷಿಸುತ್ತಿದ್ದೇವೆ, ಇದು ಕುತೂಹಲದ ಪಂದ್ಯವಾಗಲಿದೆ" ಎಂದು ಬಿಎಫ್‌ಸಿ ಕೋಚ್ ಕಾರ್ಲಸ್ ಕ್ವಾಡ್ರಾಟ್ ಹೇಳಿದ್ದಾರೆ.