ನವದೆಹಲಿ:2027ರಎಎಫ್‌ಸಿ ಏಷ್ಯನ್ ಕಪ್ ಟೂರ್ನಿಯ ಆತಿಥ್ಯ ವಹಿಸಲು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ತನ್ನ ಉಮೇದುವಾರಿಕೆಯನ್ನು ಘೋಷಿಸಿದ್ದು, ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಈ ಮೆಗಾ ಈವೆಂಟ್ ಆಯೋಜಿಸುವುದು ಅಭಿಮಾನಿಗಳಿಗೆ ನೀಡುವ 'ಅತ್ಯುತ್ತಮ ಉಡುಗೊರೆ' ಆಗಿದೆ. ಏಷ್ಯಾ ಖಂಡದ ಪ್ರಮುಖ ತಂಡಗಳು ಭಾರತದ ಮಣ್ಣಿನಲ್ಲಿ ಆಡುವುದು ಮಹತ್ತರವಾಗಿದೆ ಎಂದಿದ್ದಾರೆ.
"ದೇಶಕ್ಕಾಗಿ ಆಡುವುದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ ಮತ್ತು ನಮ್ಮ ರಾಷ್ಟ್ರವು ಎಎಫ್‌ಸಿ, ಏಷ್ಯನ್ ಕಪ್ 2027 ಅನ್ನು ಆಯೋಜಿಸುವುದು ಇನ್ನೂ ದೊಡ್ಡ ವಿಚಾರವಾಗಿದೆ. ಇದು ಅಭಿಮಾನಿಗಳಿಗೆ ಮತ್ತು ದೇಶದ ಎಲ್ಲ ಜನರಿಗೆ ನೀಡುವ ಅತ್ಯುತ್ತಮ ಕೊಡುಗೆಯಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಚೆಟ್ರಿ ಹೇಳಿದ್ದಾರೆ.
"ನಾವು ಈಗಾಗಲೇ ಭಾರತದಲ್ಲಿ 2017 ರಲ್ಲಿ ಫಿಫಾ ಅಂಡರ್ -17 ವಿಶ್ವಕಪ್ ಅನ್ನು ಆಯೋಜಿಸಿದ್ದು, ಟೂರ್ನಿ ದೊಡ್ಡ ಯಶಸ್ಸು ಕಂಡಿದೆ. 2022 ರಲ್ಲಿ ಮುಂಬರುವ ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್ ಅನ್ನು ನಾವು ಆಯೋಜಿಸಲಿದ್ದೇವೆ. 2027ರ ಎಎಫ್‌ಸಿ ಏಷ್ಯನ್ ಕಪ್ ಟೂರ್ನಿ ಆಯೋಜನೆಯ ಹಕ್ಕು ಪಡೆಯುವುದು ನಿಜಕ್ಕೂ ಸಂತಸದ ವಿಷಯ, ಅದಕ್ಕಾಗಿ ನಾನು ಎಐಎಫ್ಎಫ್ಗೆ ಶುಭ ಹಾರೈಸುತ್ತೇನೆ" ಎಂದಿದ್ದಾರೆ.
ಎಎಫ್‌ಸಿ ಏಷ್ಯನ್ ಕಪ್ 2011 ರಲ್ಲಿ ಭಾರತದ ಪರ ಅವಿಸ್ಮರಣೀಯ ಪ್ರದರ್ಶನ ತೋರುವ ಮೂಲಕ ಸ್ಪೈಡರ್‌ಮ್ಯಾನ್ ಎಂಬ ಹೆಸರು ಗಳಿಸಿದ ಐಕಾನಿಕ್ ಗೋಲ್‌ಕೀಪರ್ ಸುಬ್ರತಾ ಪಾಲ್, ಪಂದ್ಯಾವಳಿಯ ಆತಿಥ್ಯ ವಹಿಸಲು ಮತ್ತು 'ಜಾಗತಿಕ ಫುಟ್ಬಾಲ್ ತಾಣ' ಆಗಲು ದೇಶ ಸಿದ್ಧವಾಗಿದೆ ಎಂದು ಹೇಳಿದ್ದಾರೆ.