ನವದೆಹಲಿ: ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಕಾರ್ಲ್ಟನ್ ಚಾಪ್ಮನ್ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
49 ವರ್ಷದ ಚಾಪ್ಮನ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ತೀವ್ರ ಬೆನ್ನು ನೋವಿನ ಕಾರಣ ಭಾನುವಾರ ರಾತ್ರಿ ಆಸ್ಪತ್ರಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಚಾಪ್ಮನ್ ಟಾಟಾ ಫುಟ್ಬಾಲ್ ಅಕಾಡೆಮಿಯಲ್ಲಿ ಪಳಗಿದ ಆಟಗಾರನಾಗಿದ್ದು, ಅವರು ಆಡುವ ದಿನಗಳಲ್ಲಿ ಭಾರತ ತಂಡದ ಅತ್ಯುತ್ತಮ ಮಿಡ್ಫೀಲ್ಡರ್ಗಳಲ್ಲಿ ಒಬ್ಬರಾಗಿದ್ದರು. ಅವರು 1990ರಲ್ಲಿ ಟಿಎಫ್ಎಗೆ ಸೇರ್ಪಡೆಗೊಂಡಿದ್ದರು. ಮೂರು ವರ್ಷಗಳ ನಂತರ ಪೂರ್ವ ಬೆಂಗಾಳ ಕ್ಲಬ್ ಸೇರಿಕೊಂಡಿದ್ದರು.
1997ರ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ ಗೋಲ್ಡ್ ಕಪ್ನಲ್ಲಿ ಇರಾಕ್ ತಂಡದ ವಿರುದ್ಧ ಹ್ಯಾಟ್ರಿಕ್ ಗೋಲುಗಳಿಸಿ ಭಾರತಕ್ಕೆ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಭಾರತ ತಂಡದ ಪರ ಅವರು 1995 ಮತ್ತು 2001 ರ ನಡುವೆ ಮಿಡ್‌ಫೀಲ್ಡರ್ ಆಗಿ ಆಡಿದ್ದರು ಮತ್ತು ಕೆಲವು ಕಾಲ ತಂಡದ ನಾಯಕರಾಗಿದ್ದರು.