ಬ್ಯುಚರೆಸ್ಟ್:ನಿನ್ನೆ ನಡೆದ ರೋಮಾಂಚನಕಾರಿ ಪಂದ್ಯದಲ್ಲಿ ವಿಶ್ವ ಫುಟ್ಬಾಲ್ ಚಾಂಪಿಯನ್ ಫ್ರಾನ್ಸ್ ತಂಡವನ್ನು 5-4 ಗೋಲುಗಳಿಂದ ಸ್ವಿಟ್ಜರ್ಲೆಂಡ್ ಮಣಿಸಿದ್ದು, ಈ ಮೂಲಕ ಟೂರ್ನಿಯ 8ರ ಘಟ್ಟಕ್ಕೆ ಪ್ರವೇಶ ಪಡೆಯಿತು.
ಬ್ಯುಚರೆಸ್ಟ್‌ನಲ್ಲಿ ನಡೆದ ಕುತೂಹಲಕಾರಿ ಪಂದ್ಯದಲ್ಲಿ ಕೈಲಿಯನ್ ಬಾಪ್ಪೆ ನಿರ್ಣಾಯಕ ಸ್ಪಾಟ್ ಕಿಕ್‌ನಲ್ಲಿ ಗೋಲು ಗಳಿಸಲು ವಿಫಲರಾಗುವ ಮೂಲಕ ವಿಶ್ವಚಾಂಪಿಯನ್ನರು ಟೂರ್ನಿಯಿಂದ ಹೊರ ನಡೆದರು. ಇದಕ್ಕೂ ಮುನ್ನ ನಿಗದಿತ ಸಮಯದಲ್ಲಿ ಪಂದ್ಯ 3-3 ಗೋಲುಗಳಿಂದ ಪಂದ್ಯ ಡ್ರಾಗೊಂಡಿತ್ತು.
90ನೇ ನಿಮಿಷದಲ್ಲಿ ಸ್ವಿಟ್ಜರ್ಲೆಂಡ್‌ನ ಮಾರಿಯೊ ಗವ್‌ರನೊವಿಕ್ ಹೊಡೆದ ಗೋಲಿನಿಂದಾಗಿ ಪಂದ್ಯ ಸಮಬಲ ಸಾಧಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಸ್ವಿಟ್ಜರ್ಲೆಂಡ್ ತಂಡ ಸ್ಪೇನ್ ಜತೆ ಸೆಣಸಾಡಲಿದೆ. ವ್ಲಾದಿಮಿರ್ ಪೆಟ್ಕೊವಿಕ್ ನೇತೃತ್ವದ ಸ್ವಿಸ್ ತಂಡಕ್ಕೆ ಹ್ಯಾರಿಸ್ ಸೆಫೆರೊವಿಕ್ 15ನೇ ನಿಮಿಷದಲ್ಲೇ ಮುನ್ನಡೆ ತಂದುಕೊಟ್ಟರು. ಆದರೆ ಎರಡನೇ ಅವಧಿಯ ಆರಂಭದಲ್ಲಿ ರಿಕಾರ್ಡೊ ರೋಡ್ರಿಗಸ್ ಅವರ ಪೆನಾಲ್ಟಿಯನ್ನು ಅದ್ಭುತವಾಗಿ ತಡೆಯುವ ಮೂಲಕ ಹ್ಯುಗೊ ಲಾರಿಸ್ ಗಮನ ಸೆಳೆದರು.