ಮುಂಬೈ :ಭಾರತದ ಅತ್ಯುನ್ನದ ಫುಟ್ಬಾಲ್ ಸ್ಪರ್ಧೆ ಇಂಡಿಯನ್ ಸೂಪರ್ ಲೀಗ್ನ 7ನೇ ಆವೃತ್ತಿಯಿಂದ ಈಸ್ಟ್ ಬೆಂಗಾಲ್(ಪೂರ್ವ ಬಂಗಾಳ) 11ನೇ ತಂಡವಾಗಿ ಸೇರ್ಪಡೆಗೊಂಡಿದೆ ಎಂದು ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ (ಎಫ್‌ಎಸ್‌ಡಿಎಲ್) ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಭಾನುವಾರ ಖಚಿತಪಡಿಸಿದ್ದಾರೆ.
ಶ್ರೀ ಸಿಮೆಂಟ್ ಕಂಪನಿ ಈಸ್ಟ್ ಬೆಂಗಾಲ್ ಕ್ಲಬ್ನ ಬಹುಪಾಲು ಶೇರುಗಳನ್ನು ಸ್ವಾಧೀನಪಡಿಸಿಕೊಂಡು ಯಶಸ್ವಿ ಬಿಡ್ ಮಾಡಿದ ನಂತರ ಕ್ಲಬ್ ಐಎಸ್ಎಲ್ಗೆ 11ನೇ ತಂಡವಾಗಿ ಪ್ರಯಾಣಿಸಲು ಸಿದ್ಧವಾಗಿದೆ. ಈಸ್ಟ್ ಬೆಂಗಾಲ್ ಎಫ್ಸಿ ಮತ್ತು ಅವರ ಲಕ್ಷಾಂತರ ಅಭಿಮಾನಿಗಳನ್ನು ಐಎಸ್ಎಲ್ಗೆ ಸ್ವಾಗತ್ತಿಸುತ್ತಿರುವುದು ಸಂತೋಷಕರ ವಿಷಯ ಮತ್ತು ಹೆಮ್ಮೆಯ ಕ್ಷಣವಾಗಿದೆ.
ಪರಂಪರೆಯ ಕ್ಲಬ್ಗಳಾದ ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಗಾನ್(ಈಗಿನ ಎಟಿಕೆ ಮೋಹನ್ ಬಗಾನ್) ಐಎಸ್ಎಲ್ ಸೇರ್ಪಡೆಗೊಂಡಿರುವುದು ಭಾರತೀಯರಿಗೆ ಹಾಗೂ ವಿಶೇಷವಾಗಿ ರಾಜ್ಯಗಳ ಯುವ ಪ್ರತಿಭೆಗಳಿಗೆ ಅಪಾರ ಅವಕಾಶಗಳನ್ನುಂಟು ಮಾಡಲಿದೆ ಎಂದು ನೀತಾ ಅಂಬಾನಿ ಅಧಿಕೃತ ಹೇಳಿಕೆ ನೀಡಿದ್ದಾರೆ."
ಪಶ್ಚಿಮ ಬಂಗಾಳವು ಭಾರತದಲ್ಲಿ ಸುಂದರ ಆಟವಾದ ಫುಟ್ಬಾಲ್ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದೆ. ಐಎಸ್ಎಲ್ ರಾಜ್ಯ ಮತ್ತು ಭಾರತದಾದ್ಯಂತ ಬೆಳೆಯುತ್ತಿರುವ ಹೆಜ್ಜೆ ಗುರುತಾಗಿದೆ. ಅಷ್ಟೇ ಅಲ್ಲ, ದೇಶದಲ್ಲಿ ಸ್ಪರ್ಧಾತ್ಮಕ ಮತ್ತು ದೃಢ ಫುಟ್ಬಾಲ್ ಪರಿಸರ ವ್ಯವಸ್ಥೆ ನಿರ್ಮಿಸುವ ನಮ್ಮ ಧ್ಯೇಯದ ಮತ್ತೊಂದು ಹೆಜ್ಜೆಯಾಗಿದೆ" ಎಂದು ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ 2 ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್)ನಲ್ಲಿ ಫುಟ್ಬಾಲ್ ದೈತ್ಯ ಈಸ್ಟ್ ಬೆಂಗಾಲ್ ಸ್ಪರ್ಧಿಸಲಿದೆ ಎಂದು ಖಚಿತಪಡಿಸಿದ್ದರು. ಇದೀಗ ನೀತಾ ಅಂಬಾನಿ 2021ರ ಆವೃತ್ತಿಯಿಂದಲೇ 100 ವರ್ಷಗಳ ಇತಿಹಾಸವಿರುವ ಕ್ಲಬ್ ಐಎಸ್ಎಲ್ನಲ್ಲಿ ಸ್ಪರ್ಧಿಸುವುದನ್ನು ಖಚಿತಪಡಿಸಿದ್ದಾರೆ.