ಲಂಡನ್:ಯೂರೋ 2020ರ ಫೈನಲ್ ಪಂದ್ಯದಲ್ಲಿ ಇಟಲಿ ವಿರುದ್ಧ ಇಂಗ್ಲೆಂಡ್ ತಂಡ ಸೋಲು ಕಂಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತಂಡದ ಕಪ್ಪು ವರ್ಣೀಯ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿರುವುದಕ್ಕೆ ಮಾಜಿ ಇಂಗ್ಲಿಷ್ ಕ್ರಿಕೆಟರ್ ಕೆವಿನ್ ಪೀಟರ್ಸನ್ ಕಿಡಿಕಾರಿದ್ದಾರೆ. 2030ರ ವಿಶ್ವಕಪ್ ಆಯೋಜನೆಯ ಹಕ್ಕನ್ನು ಪಡೆದರೆ ಅದು ಅದ್ಭುತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ತಡರಾತ್ರಿ ನಡೆದ ಯೂರೋ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪೆನಾಲ್ಟಿ ಶೂಟೌಟ್ನಲ್ಲಿ 3-2ರ ಅಂತರದಲ್ಲಿ ಸೋಲು ಕಂಡಿತು. ಪೆನಾಲ್ಟಿ ಶೂಟೌಟ್ನಲ್ಲಿ ಗೋಲು ಗಳಿಸಲು ವಿಫಲರಾದ ಮೂವರು ಕಪ್ಪು ಆಟಗಾರರನ್ನು ಕೆಲವು ಅಭಿಮಾನಿಗಳು ಜನಾಂಗೀಯವಾಗಿ ನಿಂದಿಸಿದ್ದರು. ಇದಕ್ಕೆ ಫುಟ್ಬಾಲ್ ಅಸೋಸಿಯೇಷನ್, ಪ್ರಧಾನಿ ಬೋರಿಸ್ ಜಾನ್ಸನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಮಾಜಿ ಕ್ರಿಕೆಟ್ ತಂಡದ ನಾಯಕ ಪೀಟರ್ಸನ್ ಕೂಡ ನಿಂದಿಸಿದವರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಕಳೆದ ರಾತ್ರಿ ಡೈಲನ್ ಅವರೊಂದಿಗೆ ನಮ್ಮ ಕಾರಿನಲ್ಲಿ ಮನೆಗೆ ತಲುಪಿದ ದಾರಿ ಸಂಪೂರ್ಣವಾಗಿ ಭಯಾನಕವಾಗಿತ್ತು. 2021ರಲ್ಲಿ ಇಂತಹ ವರ್ತನೆಯೇ? ನಮಗೆ ಸಾಕಷ್ಟು ಆನಂದವನ್ನು ತಂದುಕೊಟ್ಟ ಆಟಗಾರರನ್ನು ನಿಂದಿಸುವುದೇ? 2030ರ ವಿಶ್ವಕಪ್ ಅನ್ನು ಆಯೋಜನೆ ಮಾಡಲು ನಾವು ಅರ್ಹರೇ?" ಎಂದು ಪೀಟರ್ಸನ್ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಿಂದಿಸಿದವರನ್ನು ಗುರುತಿಸಿ ಎಂದು ಬ್ರಿಟನ್ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.