ಮಾಲೆ(ಮಾಲ್ಡೀವ್ಸ್): ಭಾರತೀಯ ಫುಟ್ಬಾಲ್ ತಂಡಕ್ಕೆ ಎರಡು ಸಿಹಿ ಸುದ್ದಿಗಳು ಶನಿವಾರ ದೊರಕಿವೆ. ಸ್ಯಾಫ್ ಕಪ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಗೆದ್ದು ಬೀಗಿದ್ದು ಒಂದೆಡೆಯಾದರೆ, ಇದೇ ವೇಳೆ ಲಿಯೋನೆಲ್ ಮೆಸ್ಸಿ ಅವರ ದಾಖಲೆಯನ್ನು ತಂಡದ ನಾಯಕ ಸುನಿಲ್ ಚೆಟ್ರಿ ಸರಿಗಟ್ಟಿದರು.
ಬುಧವಾರ ನಡೆದ ಪಂದ್ಯದಲ್ಲಿ ಸ್ಯಾಫ್ ಕಪ್ ಚಾಂಪಿಯನ್ಶಿಪ್ ಚಾಂಪಿಯನ್ ಆಗಿದ್ದ ಮಾಲ್ಡೀವ್ಸ್ ತಂಡವನ್ನು ಎದುರಿಸಿ ಫೈನಲ್ಗೇರಿದ್ದ ಭಾರತ ಶನಿವಾರ ನೇಪಾಳವನ್ನು ಮಣಿಸುವ ಮೂಲಕ ಚಾಂಪಿಯನ್ಶಿಪ್ ಟೈಟಲ್ ತನ್ನದಾಗಿಸಿಕೊಂಡಿತು.
3-0 ಗೋಲುಗಳ ಮೂಲಕ ನೇಪಾಳ ವಿರುದ್ಧ ಗೆದ್ದ ಭಾರತೀಯ ತಂಡಕ್ಕೆ ಎಲ್ಲಾ ಗೋಲುಗಳೂ ದ್ವಿತೀಯಾರ್ಧದಲ್ಲೇ ಸಿಕ್ಕಿವೆ ಎಂಬುದು ಮತ್ತೊಂದು ವಿಶೇಷ. ಸುನಿಲ್ ಚೆಟ್ರಿ 49ನೇ ನಿಮಿಷದಲ್ಲಿ, ಸುರೇಶ್ ಸಿಂಗ್ 50ನೇ ನಿಮಿಷದಲ್ಲಿ, ಸಹಲ್ ಅಬ್ದುಲ್ ಸಮದ್ 90ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪಂದ್ಯದಲ್ಲಿ ನೇಪಾಳ ಕನಿಷ್ಠ ಒಂದು ಗೋಲೂ ದಾಖಲಿಸಲು ವಿಫಲವಾಗಿದೆ.
ಸ್ಯಾಫ್ ಕಪ್ ಚಾಂಪಿಯನ್ಶಿಪ್ನಲ್ಲಿ 12 ಬಾರಿ ಫೈನಲ್ ತಲುಪಿದ್ದ ಭಾರತೀಯ ತಂಡ, ಈ ಬಾರಿಯೂ ಸೇರಿದಂತೆ ಎಂಟು ಬಾರಿ ಟೈಟಲ್ ತನ್ನದಾಗಿಸಿಕೊಂಡಿದೆ. ಐದು ಬಾರಿ ರನ್ನರ್ ಅಪ್ ಆಗಿದ್ದು, ಇದಕ್ಕೂ 2018ರಲ್ಲಿ ಮಾಲ್ಡೀವ್ ವಿರುದ್ಧ ಫೈನಲ್ನಲ್ಲಿ ಸೋಲು ಕಂಡಿತ್ತು.