ಸಾವೊ ಪೌಲ್ ( ಬ್ರೆಜಿಲ್): ಫುಟ್ಬಾಲ್ ದಂತಕಥೆ ಬ್ರೆಜಿಲಿಯನ್ ನಿವೃತ್ತ ಆಟಗಾರ ಪೀಲೆ ಕರುಳು ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ತೀವ್ರ ನಿಗಾ ಘಟಕದಿಂದ ಅವರಿಗೆ ಸಾಮಾನ್ಯ ವಾರ್ಡ್ಗೆ ಶಿಫ್ಟ್ ಆಗಿದ್ದಾರೆ.
ಹಾಸ್ಯಚಟಾಕೆ ಹಾರಿದ ಪೀಲೆ
80 ವರ್ಷದ ಪೀಲೆ ಉತ್ತಮ ಸ್ಥಿತಿಯಲ್ಲಿದ್ದಾರೆ ಮತ್ತು ಈಗಿನಿಂದ ಅವರು ಚೇತರಿಸಿಕೊಳ್ಳಲಿದ್ದಾರೆ ಎಂದು ಆಲ್ಬರ್ಟ್ ಐನ್‌ಸ್ಟೈನ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಪೀಲೆ, ನಾನೀಗ ಆರೋಗ್ಯವಾಗಿದ್ದೇನೆ. ಬೇಕಾದರೆ 90 ನಿಮಿಷವೂ ಆಡಬಲ್ಲೆ, ತೀವ್ರ ನಿಗಾ ಘಟಕದಿಂದ ಹೊರಬಂದ ಬಳಿಕ ಹೆಚ್ಚುವರಿ ಸಮಯದಲ್ಲೂ ಆಡಬಲ್ಲೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ನಾನಿಲ್ಲಿಗೆ ಬಂದಾಗ ನನಗೆ ಬಂದಿರುವ ಸಾವಿರಾರು ಪ್ರೀತಿಯ ಸಂದೇಶಗಳ ಓದಲಾಗಿಲ್ಲ ಎಂದು ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ನನಗಾಗಿ ಒಂದೆರಡು ನಿಮಿಷ ಮೀಸಲಿಟ್ಟ ಎಲ್ಲರಿಗೂ ಧನ್ಯವಾದಗಳು. ನನಗೆ ನೀವು ಪಾಸಿಟಿವ್ ಶಕ್ತಿ ನೀಡಿದ್ದೀರಿ ಅದಕ್ಕಾಗಿ ನಿಮಗೆ ಧನ್ಯವಾದ ಎಂದಿದ್ದಾರೆ.
ಮೂರು ವಿಶ್ವಕಪ್ ಗೆದ್ದ ಆಟಗಾರ
ಪೀಲೆ ಆಗಸ್ಟ್ನಲ್ಲಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಹೀಗಾಗಿ ಶಸ್ತ್ರ ಚಿಕಿತ್ಸೆ ನಡೆಸಲು ನಿರ್ಧರಿಸಲಾಗಿತ್ತು. ಮೂರು ವಿಶ್ವಕಪ್ ಗೆದ್ದ ಏಕೈಕ ಪುರುಷ ಆಟಗಾರ ಪೀಲೆ ಆಗಿದ್ದಾರೆ. ಪೀಲೆ 1958, 1962 ಮತ್ತು 1970 ವಿಶ್ವಕಪ್‌ಗಳನ್ನು ಗೆದ್ದಿದ್ದರು. 92 ಪಂದ್ಯಗಳಲ್ಲಿ 77 ಗೋಲುಗಳನ್ನು ಗಳಿಸಿದ ಬ್ರೆಜಿಲ್‌ನ ಸಾರ್ವಕಾಲಿಕ ಅಗ್ರಗಣ್ಯ ಸ್ಕೋರರ್ ಪೀಲೆ ಆಗಿದ್ದಾರೆ.