ಗೋವಾ:ಕೊರೊನಾ ಆತಂಕದ ನಡುವೆ ನಿನ್ನೆಯಿಂದ ಆರಂಭಗೊಂಡಿರುವ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಎಟಿಕೆ ಮೋಹನ್ ಬಗಾನ್ ತಂಡ ಕೇರಳ ಬ್ಲಾಸ್ಟರ್ ವಿರುದ್ಧ ಭರ್ಜರಿ ಜಯ ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಎಟಿಕೆ ತಂಡದ ಸ್ಟಾರ್ ಆಟಗಾರ ಹಾಗೂ ತಂಡದ ಪರವಾಗಿ ಅತಿ ಹೆಚ್ಚು ಗೋಲ್ ಬಾರಿಸಿರುವ ರಾಯ್ ಕೃಷ್ಣ ಪಂದ್ಯದ 67ನೇ ನಿಮಿಷದಲ್ಲಿ ಗೋಲ್ ಬಾರಿಸುವ ಮೂಲಕ 1-0ರ ಗೆಲುವು ತಂದು ಕೊಟ್ಟಿದ್ದಾರೆ.
ಒಂದು ಗೋಲು ಗಳಿಸಿದ ಬಳಿಕ ಅದೇ ಸ್ಥಿತಿಯನ್ನು ಕಾಪಾಡಿಕೊಂಡ ಎಟಿಕೆ, ಕೇರಳ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಎರಡು ತಂಡಗಳು ಸಹ ಮೊದಲಾರ್ಧದಲ್ಲಿ ಗೋಲು ಗಳಿಸುವಲ್ಲಿ ವಿಫಲವಾಗಿದ್ದವು. ಆದರೆ, ದ್ವಿತಿಯಾರ್ಧದಲ್ಲಿ ಎಟಿಕೆ ತಂಡ ಈ ಸೀಸನ್ನ ಮೊದಲ ಗೋಲು ದಾಖಲಿಸಿತು.
ಇಂದು ಟೂರ್ನಿಯ ಎರಡನೇ ಪಂದ್ಯ ಇಲ್ಲಿನ ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎನ್ಇಯು (ನಾರ್ಥ್ ಈಸ್ಟ್ ಯುನೈಟೆಡ್) ಹಾಗೂ ಮುಂಬೈ ಸಿಟಿ ಮುಖಾಮುಖಿಯಾಗಲಿವೆ.