ಟುರಿನ್: ಇನ್ನೂ 20 ವರ್ಷಗಳ ಕಾಲ ಫುಟ್ಬಾಲ್ನೊಂದಿಗೆ ಬಾಂಧವ್ಯ ಹೊಂದಲಿದ್ದೇನೆ ಎಂಬ ಭರವಸೆ ನೀಡಲಾರೆನು. ಆದರೆ, ಅದಕ್ಕೆ ಇಷ್ಟೇ ವರ್ಷಗಳು ಎಂದು ಹೇಳಲು ಸಾಧ್ಯವಿಲ್ಲ. ನನ್ನಲ್ಲಿ ಇಚ್ಛಾಶಕ್ತಿ ಕುಂದುವವರೆಗೂ ನೂರಕ್ಕೆ ನೂರರಷ್ಟು ಕಾಲ್ಚೆಂಡಿನೊಂದಿಗೆ ಪ್ರಯಾಣ ಮುಂದುವರೆಸುತ್ತೇನೆ ಎಂದುಪೋರ್ಚುಗಲ್ ಹಾಗೂ ಯುವೆಂಟಸ್ ಫುಟ್ಬಾಲ್ ಕ್ಲಬ್‌ನ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿದರು.
36ನೇ ಜನ್ಮದಿನಕ್ಕೆ ಸ್ನೇಹಿತರು, ಅಭಿಮಾನಿಗಳು, ಹಿತೈಷಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ. ಶುಭಕೋರಿದವರಿಗೆ ಕೃತಜ್ಞತೆ ಅರ್ಪಿಸಲು ಇನ್ಸ್ಟಾಗ್ರಾಂನಲ್ಲಿ ಸುದೀರ್ಘವಾದ ಪೋಸ್ಟ್ ಹಂಚಿಕೊಂಡಿರುವ ರೊನಾಲ್ಡೊ, ನನ್ನಲ್ಲಿ ಇಚ್ಛಾಶಕ್ತಿ ಇರುವವರೆಗೂ ನಿಮ್ಮನ್ನು ರಂಜಿಸುತ್ತೇನೆ. ಸದಾ ಹೀಗೆಯೇ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ.
ರೊನಾಲ್ಡೊ ಪೋಸ್ಟ್ ಹೀಗಿದೆ...
36 ವರ್ಷ. ನಂಬಲಾಗದು! ಈ ಜನ್ಮದಿನ ಮೊದಲ ಹುಟ್ಟು ಹಬ್ಬದಂತೆ ಭಾಸವಾಗುತ್ತಿದೆ. ಪುಟ್ಬಾಲ್ನೊಂದಿಗಿನ ಪ್ರಯಾಣ ಸದಾ ನೆನಪಿಡುವ ಸಾಹಸ ಮತ್ತು ಕಥೆಗಳಿಂದ ತುಂಬಿದೆ. ನನ್ನ ಮೊದಲ ಚೆಂಡು, ನನ್ನ ಮೊದಲ ತಂಡ, ನನ್ನ ಮೊದಲ ಗುರಿ. ಸಮಯ ನಮ್ಮ ಹಿಡಿತಕ್ಕೆ ಸಿಗದಂತೆ ಹಾರುತ್ತಿದೆ! ಮಡೈರಾದಿಂದ ಲಿಸ್ಬನ್‌ಗೆ, ಲಿಸ್ಬನ್‌ನಿಂದ ಮ್ಯಾಂಚೆಸ್ಟರ್‌ಗೆ, ಮ್ಯಾಂಚೆಸ್ಟರ್‌ನಿಂದ ಮ್ಯಾಡ್ರಿಡ್‌ಗೆ, ಮ್ಯಾಡ್ರಿಡ್‌ನಿಂದ ಟುರಿನ್ಗೆ, ಎಲ್ಲಕ್ಕಿಂತ ಹೆಚ್ಚಾಗಿ ಹೃದಯಾಂತರಾಳದಿಂದ ಜಗತ್ತಿಗೆ ಸಾಧ್ಯವಾದಷ್ಟು ಎಲ್ಲವನ್ನೂ ನೀಡಿದ್ದೇನೆ. ಜೀವನದಲ್ಲಿ ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸಿದ್ದೇನೆ ಎಂದು ಪೋಸ್ಟ್ನ ಅಡಿಬರಹದಲ್ಲಿ ಬರೆದುಕೊಂಡಿದ್ದಾರೆ.
ಅದಕ್ಕೆ ಪ್ರತಿಯಾಗಿ, ನೀವು ನನಗೆ ಕೊಟ್ಟಿರುವ ಪ್ರೀತಿ, ಮೆಚ್ಚುಗೆ, ಉಪಸ್ಥಿತಿ ಮತ್ತು ಬೆಂಬಲ ಅಳತೆಗೆ ಸಿಗದು. ನಿಮ್ಮ ಈ ಅಪಾರ ಪ್ರೀತಿಗೆ ಬರೀ ಧನ್ಯವಾದ ಹೇಳಿದರೆ ಸಾಲುವುದಿಲ್ಲ. ನೀವಿಲ್ಲದೇ ನಾನು ಶೂನ್ಯ. ಈಗಾಗಲೇ ವೃತ್ತಿಪರ ಫುಟ್ಬಾಲ್ ಆಟಗಾರನಾಗಿ 20 ವರ್ಷಗಳ ಕಾಲ ಸುಂದರ ಪ್ರಯಾಣ ಬೆಳೆಸಿದ್ದೇನೆ. ಇನ್ನು 20 ವರ್ಷಕ್ಕೂ ಅಧಿಕ ಕಾಲ ಫುಟ್ಬಾಲ್ ಆಡುತ್ತೇನೆ ಎಂದು ಭರವಸೆ ಕೊಡಲಾರೆನು. ಆದರೆ, ಒಂದಂತು ಖಚಿತ ನನ್ನನ್ನು ಎಲ್ಲಿಯವರೆಗೂ ಸ್ವೀಕರಿಸುತ್ತೀರೋ ಅಲ್ಲಿಯವರೆಗೂ ನಿಮ್ಮನ್ನು ರಂಜಿಸುತ್ತೇನೆ. ಇದು ನೂರಕ್ಕೆ ನೂರು ಸತ್ಯ ಎಂದು ಹೇಳಿದ್ದಾರೆ.
ತಮ್ಮ ವೃತ್ತಿಜೀವನದಲ್ಲಿ ಸ್ಪೋರ್ಟಿಂಗ್ ಸಿಪಿ, ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್ ಮತ್ತು ಯುವೆಂಟಸ್ ಪರ ಆಡಿರುವ ರೊನಾಲ್ಡೊ, 2020-21ರ ಋತುವಿನಲ್ಲಿ ಯುವೆಂಟಸ್ ಪರ 23 ಪಂದ್ಯಗಳಲ್ಲಿ 22 ಗೋಲುಗಳನ್ನು ದಾಖಲಿಸಿದ್ದರು. ಮುಂದಿನ ದಿನಗಳಲ್ಲಿ ಸೆರಿ ಎ ಫುಟ್ಬಾಲ್ ಲೀಗ್ನಲ್ಲಿ ರೋಮ್ನ್ನು ಎದುರಿಸಲಿದ್ದಾರೆ. ಯುವೆಂಟಸ್ ಪ್ರಸ್ತುತ 19 ಪಂದ್ಯಗಳಿಂದ 39 ಅಂಕಗಳೊಂದಿಗೆ ಸೆರಿ ಎ ಫುಟ್ಬಾಲ್ ಲೀಗ್ನ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.