ನವದೆಹಲಿ :ರಾಷ್ಟ್ರೀಯ ತಂಡದ ಸೆಂಟ್ರಲ್ ಡಿಫೆಂಡರ್ ಆಟಗಾರ ಸಂದೇಶ್ ಜಿಂಗಾನ್ ಮತ್ತು ಮಹಿಳಾ ತಂಡದ ಫಾರ್ವರ್ಡ್ ಎನ್ ಬಾಲಾದೇವಿ ಅವರ ಹೆಸರನ್ನು ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್‌ನ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.
ಮೇ 5ರಂದು ಕೇಂದ್ರ ಕ್ರೀಡಾ ಸಚಿವಾಲಯ ಈ ವರ್ಷದ ಕ್ರೀಡಾ ಪುರಸ್ಕಾರಕ್ಕಾಗಿ ಕ್ರೀಡಾಪಟುಗಳ ಹೆಸರುಗಳನ್ನು ಸಲ್ಲಿಸುವಂತೆ ಕ್ರೀಡಾ ಸಂಸ್ಥೆಗಳಿಗೆ ಆದೇಶ ನೀಡಿತ್ತು.
ಇತ್ತೀಚಿನ ವರ್ಷಗಳಲ್ಲಿ ತೋರಿದ ಗಮನಾರ್ಹ ಸಾಧನೆ ಮತ್ತು ಸ್ಥಿರ ಪ್ರದರ್ಶನಗಳಿಗೆ ಮನ್ನಣೆ ನೀಡಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಸಂದೇಶ್ ಮತ್ತು ಬಾಲಾ ದೇವಿ ಅವರ ಹೆಸರುಗಳನ್ನು ನಾಮ ನಿರ್ದೇಶನ ಮಾಡಲಾಗಿದೆ ಎಂದು ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಕುಶಲ್ ದಾಸ್ ತಿಳಿಸಿದ್ದಾರೆ.
ನಾವು ಜಿಂಗಾನ್ ಮತ್ತು ಬಾಲಾದೇವಿಯವರ ಹೆಸರುಗಳನ್ನುಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ನಿರ್ಧರಿಸಿದ್ದೇವೆ. ಒಬ್ಬ ಪುರುಷ ಹಾಗೂ ಒಬ್ಬಮಹಿಳಾ ಆಟಗಾರ್ತಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ ಎಂದು ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
26 ವರ್ಷದ ಜಿಂಗಾನ್ ಭಾರತದ ಫುಟ್‌ಬಾಲ್ ದಂತಕತೆ ಭೈಚುಂಗ್ ಭುಟಿಯಾ ಹಾಗೂ ಸಿಕ್ಕಿಮ್ ಯುನೈಟೆಡ್ನ ರೆನ್ನೆಡಿ ಸಿಂಗ್ ಜೊತೆ ಆಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಭಾರತ ತಂಡದ ಸುನಿಲ್ ಚೆಟ್ರಿ ಬಿಟ್ಟರೆ ತಂಡದ ಪ್ರಮುಖ ಆಟಗಾರರಾಗಿದ್ದಾರೆ.