ದುಬೈ: ಕ್ರಿಕೆಟ್ ಆಡುವ ಕುಟುಬದಲ್ಲಿ ಹುಟ್ಟಿ, ಚಿಕ್ಕಂದಿನಿಂದಲೇ ಕ್ರಿಕೆಟ್ ನೋಡಿ, ಆಡಿ ಬೆಳೆದು, ಆಸ್ಟ್ರೇಲಿಯಾ ಕ್ರಿಕೆಟ್ನಲ್ಲಿ(Australia cricket) ದೊಡ್ಡ ಹೆಸರು ಗಳಿಸಿದ್ದ ಕುಟುಂಬದಿಂದ ಬಂದಿದ್ದ ಮಿಚಲ್ ಮಾರ್ಷ್(Mitchell marsh) ತಮ್ಮ ಪ್ರಸಿದ್ಧತೆಗೆ, ಪ್ರತಿಭೆಗೆ ತಕ್ಕಂತೆ ಆಡುವಲ್ಲಿ ವಿಫಲರಾಗಿದ್ದರು. ತಮ್ಮನ್ನು ಆಸ್ಟ್ರೇಲಿಯಾದ ಬಹುತೇಕ ಅಭಿಮಾನಿಗಳು ದ್ವೇಷಿಸುತ್ತಾರೆ ಎಂದು 2019ರ ಆ್ಯಷಸ್ ಸರಣಿಯ ವೇಳೆ ತಾವೇ ಹೇಳಿಕೊಂಡಿದ್ದರು.
"ಆಸ್ಟ್ರೇಲಿಯಾದಲ್ಲಿ ಸಾಕಷ್ಟು ಜನರು ಕ್ರಿಕೆಟ್ ಆಟವನ್ನು ಪ್ರೀತಿಸುತ್ತಾರೆ. ಅವರು ಈ ಆಟಕ್ಕೆ ಸಾಕಷ್ಟು ಉತ್ಸಾಹ ತೋರುತ್ತಾರೆ. ಆದರೆ ನಾನು ಅವರ ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ವಿಫಲನಾಗಿದ್ದೇನೆ. ನಾನೊಬ್ಬ ಅಪರಿಮಿತ ಸಾಮರ್ಥ್ಯವುಳ್ಳ ಅತೃಪ್ತ ಪ್ರತಿಭೆ ಎಂದು ಒಪ್ಪಿಕೊಳ್ಳುತ್ತೇನೆ, ಆದರೆ ಒಂದಲ್ಲಾ ಒಂದು ದಿನ ಅವರಿಗಾಗಿ ಟ್ರೋಫಿ ಗೆದ್ದುಕೊಡುತ್ತೇನೆ" ಎಂದು 2019ರ ಆ್ಯಷಸ್ ಸರಣಿಯ ವೇಳೆ ಹೇಳಿಕೊಂಡಿದ್ದರು.
2019ರಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡದ(Australia test team) ಉಪನಾಯಕನಾಗಿದ್ದ ಮಿಚ್ ಮಾರ್ಷ್ ಅದೇ ವರ್ಷ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದಿದ್ದರು. ಅವರ ವೃತ್ತಿ ಬದುಕು ಸಾಕಷ್ಟು ಏಳು ಬೀಳುಗಳಿಂದ ಕೂಡಿದ್ದು, ಗಾಯ ಕೂಡ ಅವರ ಸ್ಥಿರತೆಗೆ ತೊಂದರೆಯನ್ನುಂಟು ಮಾಡಿತ್ತು. 2020ರಲ್ಲಿ ಆಸ್ಟ್ರೇಲಿಯಾ ತಂಡದಿಂದ ಹೊರಬಿದ್ದಿದ್ದರು. ಆಗ ಅವರ ಟಿ20 ಸರಾಸರಿ 23.45, ಆದರೆ 2021ರಲ್ಲಿ ಫಿನಿಕ್ಸ್ ಪಕ್ಷಿಯಂತೆ ಎದ್ದು ಬಂದ ಅವರು, 21 ಪಂದ್ಯಗಳಿಂದ 36.88ರ ಸರಾಸರಿಯಲ್ಲಿ 627 ರನ್ಗಳಿಸಿ ಆಸ್ಟ್ರೇಲಿಯಾ ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಂಡರು.
ಮಾರ್ಷ್ ತಮ್ಮ ವೃತ್ತಿ ಜೀವನದಲ್ಲಿ ಬಹುಪಾಲು ಕೆಳಕ್ರಮಾಂಕದಲ್ಲೇ ಆಡಿದರು. ಕೆಲವು ಪಂದ್ಯಗಳಲ್ಲಿ ಸ್ಪಿನ್ನರ್ ಆಶ್ಟನ್ ಅಗರ್ ಅವರಿಗಿಂತ ಕೆಳ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಿದ್ದರೆಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಸರಣಿಗಳಲ್ಲಿ ಅವರು 3ನೇ ಕ್ರಮಾಂಕದಲ್ಲಿ ನೀಡಿದ ಆಕರ್ಷಕ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು. ಅವರ ಪ್ರದರ್ಶನ ಎಷ್ಟರ ಮಟ್ಟಿಗಿತ್ತೆಂದರೆ ಶೇನ್ ವಾರ್ನ್ ಅಂತಹ ದಿಗ್ಗಜನೇ ಸ್ಟಾರ್ ಬ್ಯಾಟರ್ ಸ್ಮಿತ್ಗಿಂತ ಆ ಸ್ಥಾನಕ್ಕೆ ಮಾರ್ಷ್ ಸೂಕ್ತ ಎಂದು ಬಹಿರಂಗವಾಗಿ ಹೇಳಿದರು.