2007ರ ಐಸಿಸಿ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಎಸೆದ ಓವರ್ನ ಎಲ್ಲ ಎಸೆತಗಳನ್ನು ಸಿಕ್ಸರ್ಗಟ್ಟಿದ್ದ ಯುವರಾಜ್ ಸಿಂಗ್ ಕ್ರಿಕೆಟ್ ದುನಿಯಾದಲ್ಲಿ ಹೊಸದೊಂದು ದಾಖಲೆ ಬರೆದಿದ್ದರು. ಇದರ ಜೊತೆಗೆ, ಕೇವಲ 12 ಎಸೆತಗಳಲ್ಲಿ ಅರ್ಧಶತಕದ ಸಾಧನೆಯನ್ನೂ ಅವರು ಮಾಡಿದ್ದರು. ಈ ಐತಿಹಾಸಿಕ ಸಾಧನೆಗೀಗ 15 ವರ್ಷ ತುಂಬುತ್ತಿದೆ.
ಮಗ ಓರಿಯನ್ ಜೊತೆ ಕುಳಿತುಕೊಂಡು ತಾವು ಸಿಡಿಸಿದ ಸಿಕ್ಸರ್‌ಗಳ ವಿಡಿಯೋ ವೀಕ್ಷಣೆ ಮಾಡಿರುವ ಯುವರಾಜ್ ಸಿಂಗ್, ಈ ಸಂಭ್ರಮಾಚರಣೆಗೆ ಇವನಿಗಿಂತಲೂ ಉತ್ತಮ ಪಾಲುದಾರ ಬೇಕಿಲ್ಲ ಎಂದು ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಗೊಂದಲಕ್ಕೆ ತೆರೆ: ಈ ಪ್ಲೇಯರ್ ನನ್ನೊಂದಿಗೆ ಇನ್ನಿಂಗ್ಸ್ ಆರಂಭಿಸ್ತಾರೆಂದ ರೋಹಿತ್
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹರ್ಷಲ್ ಗಿಬ್ಸ್ ಬಳಿಕ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿರುವ 2ನೇ ಬ್ಯಾಟರ್ ಆಗಿ ಯುವಿ ಹೊರಹೊಮ್ಮಿದ್ದರು. ಸೆಪ್ಟೆಂಬರ್ 19, 2007ರಂದು ಟಿ20 ವಿಶ್ವಕಪ್ನಲ್ಲಿ ಈ ಘಟನೆ ನಡೆದಿತ್ತು. ಆಂಡ್ರ್ಯೂ ಫ್ಲಿಂಟಾಫ್ ಜೊತೆಗಿನ ವಾಗ್ವಾದದ ಬಳಿಕ ಕೆರಳಿದ ಯುವಿ, ಸ್ಟುವರ್ಟ್ ಬ್ರಾಡ್ ಎಸೆದ ಅಂತಿಮ ಓವರ್ನಲ್ಲಿ ಆರು ಸಿಕ್ಸರ್ ಬಾರಿಸಿದ್ದರು. ಜೊತೆಗೆ, ಟಿ20 ಕ್ರಿಕೆಟ್ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿ, ವಿಶ್ವದಾಖಲೆ ನಿರ್ಮಿಸಿದ್ದರು.
ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಕೇವಲ 14 ಎಸೆತಗಳಲ್ಲಿ ಮೂರು ಬೌಂಡರಿ, ಏಳು ಸಿಕ್ಸರ್ ಸೇರಿದಂತೆ ಅಜೇಯ 58ರನ್ಗಳಿಕೆ ಮಾಡಿದ್ದರು. ಪಂದ್ಯದಲ್ಲಿ ಇಂಗ್ಲೆಂಡ್ ಪ್ರಬಲ ಪೈಪೋಟಿಯ ಹೊರತಾಗಿ 18 ರನ್ಗಳ ಅಂತರದ ಸೋಲು ಕಂಡಿತ್ತು. ಈ ಹಣಾಹಣಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿದ ಭಾರತ ಪ್ರಶಸ್ತಿಗೆ ಮುತ್ತಿಕ್ಕಿತ್ತು.