ನವದೆಹಲಿ: ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಸ್ಟುವರ್ಟ್ ಬ್ರಾಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಭಾರತದ ಮಾಜಿ ಸ್ಟಾರ್ ಆಲ್ರೌಂಡರ್ ಯುವರಾಜ್ ಸಿಂಗ್ ಅಭಿನಂದಿಸಿದ್ದಾರೆ. ಸ್ಟುವರ್ಟ್ ಬ್ರಾಡ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಪ್ರೇರಣಾದಾಯಿ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಅವರು, "ನಿಮ್ಮ ಉತ್ಕೃಷ್ಟ ಟೆಸ್ಟ್ ವೃತ್ತಿಜೀವನಕ್ಕೆ ಅಭಿನಂದನೆಗಳು. ಅತ್ಯುತ್ತಮ ಮತ್ತು ಬ್ಯಾಟರ್‌ಗಳನ್ನು ಭಯಭೀತಗೊಳಿಸುವ ಬೌಲರ್‌ಗಳಲ್ಲಿ ನೀವೂ ಒಬ್ಬರು. ನಿಜವಾದ ದಂತಕಥೆ. ನಿಮ್ಮ ಪಯಣ ಮತ್ತು ಸಂಕಲ್ಪ ಸ್ಪೂರ್ತಿದಾಯಕವಾಗಿದೆ. ಮುಂದಿನ ಜೀವನ ಶುಭಕರವಾಗಿರಲಿ" ಎಂದು ಯುವಿ ಹಾರೈಸಿದ್ದಾರೆ.
ಸ್ಟುವರ್ಟ್ ಬ್ರಾಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಆಶ್ಚರ್ಯ ಉಂಟುಮಾಡಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ 5ನೇ ಆ್ಯಶಸ್ ಪಂದ್ಯದ 3ನೇ ದಿನದಂತ್ಯದ ಆಟ ಮುಗಿದ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ಬ್ರಾಡ್, "ಇದು ನನ್ನ ಕೊನೆಯ ಟೆಸ್ಟ್. ಅಚ್ಚುಮೆಚ್ಚಿನ ಆ್ಯಶಸ್ ಸರಣಿಯಲ್ಲಿ ನಿವೃತ್ತಿ ಘೋಷಿಸಬೇಕೆಂದು ಅಂದುಕೊಂಡಿದ್ದೆ. ಅದರಂತೆ ಈ ಸರಣಿಯಲ್ಲೇ ಕ್ರಿಕೆಟ್ನಿಂದ ನಿವೃತ್ತಿಯಾಗುತ್ತಿದ್ದೇನೆ" ಎಂದು ಹೇಳಿದ್ದರು.
ಇದನ್ನೂ ಓದಿ :Deodhar Trophy: ಶಿವ ದುಬೆ ಅಮೋಘ ಪ್ರದರ್ಶನ; ಉತ್ತರದ ವಿರುದ್ಧ ಗೆದ್ದು ಬೀಗಿದ ಪಶ್ಚಿಮ ವಲಯ
ಬ್ರಾಡ್ ಓವರ್‌ನಲ್ಲಿ 6 ಸಿಕ್ಸ್ ಬಾರಿಸಿದ್ದ ಯುವಿ: 2007ರಲ್ಲಿ ಡರ್ಬನ್ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯಾಟದಲ್ಲಿ ಯುವರಾಜ್ ಸಿಂಗ್ ಅವರು ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ 6 ಸಿಕ್ಸರ್ಗಳನ್ನು ಹೊಡೆದು ದಾಖಲೆ ಬರೆದಿದ್ದರು. ಈ ಮೂಲಕ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್ಗಳನ್ನು ಸಿಡಿಸಿದ ಮೊದಲ ಭಾರತೀಯ ಕ್ರಿಕೆಟ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸ್ಟುವರ್ಟ್ ಬ್ರಾಡ್, "ಅದು ನನ್ನ ಕಠಿಣ ದಿನಗಳಲ್ಲಿ ಒಂದಾಗಿತ್ತು. ಈ ಘಟನೆ ನನ್ನನ್ನು ಇನ್ನಷ್ಟು ಸಾಧಿಸುವಂತೆ ಪ್ರೇರೇಪಿಸಿತು" ಎಂದು ಹೇಳಿದ್ದರು.
"ಅದು ನಿಸ್ಸಂಶಯವಾಗಿ ಬಹಳ ಕಠಿಣ ದಿನವಾಗಿತ್ತು. ಇದರಿಂದ ನಾನು ತುಂಬಾ ಕಲಿತಿದ್ದೇನೆ. ನನಗೆ ನಿರ್ದಿಷ್ಟ ಗುರಿ ಎಂಬುದಿರಲಿಲ್ಲ. ಈ ಅನುಭವ ನನ್ನ ದಿನಚರಿಯನ್ನೇ ಬದಲಿಸಿತು. ಈ ಬಳಿಕ ನಾನು ಇನ್ನಷ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ತಯಾರಿ ನಡೆಸಿದೆ. ನನ್ನ ಶ್ರೇಷ್ಠ ಪ್ರದರ್ಶನಕ್ಕೆ ತಯಾರಿ ನಡೆಸಿದೆ" ಎಂದು ತಿಳಿಸಿದ್ದರು.
2007ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬ್ರಾಡ್ 167 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 602 ವಿಕೆಟ್ ಗಳಿಸಿದ್ದು, ಅತಿಹೆಚ್ಚು ವಿಕೆಟ್ ಗಳಿಸಿದ ಸಾರ್ವಕಾಲಿಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆ್ಯಂಡರ್ಸನ್ ಜೋಡಿ ಇಂಗ್ಲೆಂಡ್ನ ಅತಿ ಯಶಸ್ವಿ ವೇಗಿ ಜೋಡಿ ಎನಿಸಿದೆ.
ಇದನ್ನೂ ಓದಿ :Stuart Broad: ಆ್ಯಶಸ್ ಸರಣಿ ನಡುವೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ದಿಗ್ಗಜ ವೇಗಿ ಸ್ಟುವರ್ಟ್ ಬ್ರಾಡ್!