ನವದೆಹಲಿ: ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕುಲ್ದೀಪ್ ಯಾದವ್ ಕೂಡ ವೈಟ್ ಬಾಲ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.
ಕುಲ್ದೀಪ್ ಯಾದವ್ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಮಂಡಿ ನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 6 ತಿಂಗಳ ಬಳಿಕ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ ಮತ್ತು ರವಿ ಬಿಷ್ಣೋಯ್ ವೆಸ್ಟ್ ಇಂಡೀಸ್ ಸರಣಿಗೆ ಹೊಸ ಮುಖವಾಗಿದ್ದಾರೆ. ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಮೂಲ ಪಿಟಿಐಗೆ ಮಾಹಿತಿ ನೀಡಿದೆ.
ರವಿ ಬಿಷ್ಣೋಯ್ 2020ರ ಅಂಡರ್ 19 ವಿಶ್ವಕಪ್ನಲ್ಲಿ 6 ಪಂದ್ಯಗಳಿಂದ 17 ವಿಕೆಟ್ ಪಡೆಯುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಭಾರತದ ಯಾವುದೇ ಬೌಲರ್ ಈ ಹಿಂದಿನ ಅಂಡರ್ 19 ವಿಶ್ವಕಪ್ನಲ್ಲಿ 14 ವಿಕೆಟ್ಗಿಂತ ಹೆಚ್ಚು ವಿಕೆಟ್ ಪಡೆದಿರಲಿಲ್ಲ. ಈಗಾಗಲೇ ಐಪಿಎಲ್ನಲ್ಲಿ ಪದಾರ್ಪಣೆ ಮಾಡಿರುವ ಯುವ ಬೌಲರ್ 23 ಪಂದ್ಯಗಳಿಂದ 24 ವಿಕೆಟ್ ಪಡೆದಿರುವ ಅವರೂ ಒಟ್ಟಾರೆ ಟಿ20ಯಲ್ಲಿ 49 ವಿಕೆಟ್ ಪಡೆದಿದ್ದಾರೆ.