ಜೋಹಾನ್ಸ್‌ಬರ್ಗ್(ದಕ್ಷಿಣ ಆಫ್ರಿಕಾ): ಸೆಂಚುರಿಯನ್ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ಪತ್ರಕರ್ತರನ್ನು ನಗೆಗಡಲಲ್ಲಿ ತೇಲಿಸಿದರರು. ಐಪಿಎಲ್ ಮತ್ತು ಟಿ20 ವಿಶ್ವಕಪ್ ಕುರಿತಾದ ಪ್ರಶ್ನೆಗಳಿಗೆ 'ಬೆಣ್ಣೆಯಿಂದ ಕೂದಲು ತೆಗೆದಂತೆ' ಅವರು ಜಾರಿಕೊಂಡರು.
ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ನಗುನಗುತ್ತಾ, "ಐಪಿಎಲ್ ಬಗ್ಗೆ ಪ್ರಶ್ನೆಗಳಿಲ್ಲ. ಭಾರತ ಕ್ರಿಕೆಟ್ ತಂಡಕ್ಕೆ ಸಂಬಂಧಿಸಿದ್ದು ಮಾತ್ರ" ಎಂದು ಹೇಳಿದರು. ಪತ್ರಕರ್ತರಲ್ಲೊಬ್ಬರು, "ಇದು ಪ್ರೆಸ್‌ಮೀಟ್, ನಾವು ಕೇಳಬಹುದು" ಎಂದರು. ರೋಹಿತ್ ಬಿಸಿಸಿಐ ಲೋಗೋ ತೋರಿಸಿ ಇದು ಬೋರ್ಡ್ ಆಯೋಜಿಸಿದ ಪತ್ರಿಕಾಗೋಷ್ಠಿ ಎಂದು ಸೂಚಿಸಿದರು.
ಟಿ20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯ ಕುರಿತಾದ ಪ್ರಶ್ನೆಗಳ ನಿರೀಕ್ಷೆಯಲ್ಲಿದ್ದ ರೋಹಿತ್ ಚಾಣಾಕ್ಷತನದ ಉತ್ತರ ನೀಡಿದರು. ಮುಂದಿನ ಎರಡು ವರ್ಷಗಳಲ್ಲಿ ಬ್ಯಾಟರ್ ರೋಹಿತ್ ಶರ್ಮಾ ತಂಡದಲ್ಲಿ ತಮ್ಮನ್ನು ಹೇಗೆ ನೋಡಲು ಇಚ್ಛಿಸುತ್ತಾರೆ? ಎಂದು ಕೇಳಿದ್ದಕ್ಕೆ, "ಎಲ್ಲಿಯವರೆಗೆ ಕ್ರಿಕೆಟ್ ನನ್ನ ಮುಂದಿದೆಯೋ ಅಲ್ಲಿಯವರೆಗೆ ನಾನು ಆಡುತ್ತೇನೆ" ಎಂದು ಹೇಳಿದರು.
ನೀವು, ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಆಡಲು ಉತ್ಸುಕರಾಗಿದ್ದೀರಾ? ಎಂದಾಗ, "ಕ್ರಿಕೆಟ್ ಖೇಲ್ನೆ ಕೇಲಿಯೇ ಸಬ್ಕೋ ಹೈ (ನಾವೆಲ್ಲರೂ ಕ್ರಿಕೆಟ್ ಆಡಲು ಉತ್ಸಾಹದಿಂದಿದ್ದೇವೆ). ಪ್ರತಿಯೊಬ್ಬರೂ ತಮಗೆ ಸಿಕ್ಕ ಯಾವುದೇ ಅವಕಾಶಗಳನ್ನು ಉತ್ತಮವಾಗಿಸಲು ಬಯಸುತ್ತಾರೆ" ಎಂದರು. ಇವನ್ನೆಲ್ಲಾ ಎದುರಿಸಿದ ನಂತರ ರೋಹಿತ್ ನಗುತ್ತಲೇ, "ನೀವು ಏನು ಕೇಳಲು ಪ್ರಯತ್ನಿಸುತ್ತಿದ್ದೀರಿ ಎಂದು ನನಗೆ ಗೊತ್ತಿದೆ. ನೀವು ಉತ್ತರವನ್ನು ಪಡೆಯುತ್ತೀರಿ, ಅದಕ್ಕೆ ಸರಿಯಾದ ಸಮಯ ಬರುತ್ತದೆ" ನಸು ನಕ್ಕರು.
ವರ್ಷದ ಶ್ರಮ ಇತ್ತು:ಏಕದಿನ ವಿಶ್ವಕಪ್ ಸೋಲಿನ ಬಗ್ಗೆ ಇತ್ತೀಚೆಗೆ ರೋಹಿತ್ ಹಂಚಿಕೊಂಡಿದ್ದ ಭಾವನಾತ್ಮಕ ವಿಡಿಯೋ ಬಗೆಗಾದ ಪ್ರಸ್ತಾಪಕ್ಕೆ, "ಪ್ರಾಮಾಣಿಕವಾಗಿ ನಾವು ವರ್ಷಗಳಿಂದ ಅದಕ್ಕಾಗಿ ಶ್ರಮಿಸಿದ್ದೆವು. ಮೊದಲ 10 ಪಂದ್ಯಗಳು ಮತ್ತು ಫೈನಲ್ ಪಂದ್ಯವನ್ನು ನಾವು ಹೇಗೆ ಆಡಿದ್ದೇವೆ ಎಂಬುದನ್ನು ನೀವು ನೋಡಿದ್ದೀರಿ. ನಿಸ್ಸಂಶಯವಾಗಿ ಫೈನಲ್‌ನಲ್ಲಿ ಕೆಲವು ವಿಷಯಗಳನ್ನು ಉತ್ತಮವಾಗಿ ಮಾಡಲಿಲ್ಲ. ಇದರಿಂದ ಪಂದ್ಯ ಕಳೆದುಕೊಂಡೆವು. ಹಾಗೆಯೇ ನಾವು ಇದನ್ನು ಸರಿಯಾಗಿ ಮಾಡಲಿಲ್ಲ ಅಥವಾ ಅದನ್ನು ಸರಿಯಾಗಿ ಮಾಡಿದೆವು ಎಂದು ಗುರಿಯಾಗಿಸಿ ಹೇಳುವುದಕ್ಕೂ ಸಾಧ್ಯವಿಲ್ಲ" ಎಂದು ರೋಹಿತ್ ಶರ್ಮಾ ಹೇಳಿದರು.
ಇದನ್ನೂ ಓದಿ:ಅಭಿಮಾನಿಗಳು ತುಂಬಿದ ಧೈರ್ಯ ಮತ್ತೆ ಮೈದಾನಕ್ಕಿಳಿಯುವ ಶಕ್ತಿ ನೀಡಿದೆ: ರೋಹಿತ್ ಶರ್ಮಾ