ಅಡಿಲೇಡ್‌ನಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನದೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. ಇದರಿಂದ ತಂಡವು ಭಾರತೀಯ ಕ್ರಿಕೆಟ್ ದಿಗ್ಗಜರು ಸೇರಿದಂತೆ ಹಲವರಿಂದ ಟೀಕೆಗೆ ಗುರಿಯಾಗಿದೆ. ಲೆಜೆಂಡರಿ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಭಾರತ ತಂಡದಲ್ಲಿನ 'ವರ್ಕ್ಲೋಡ್' ಪರಿಕಲ್ಪನೆ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಶ್ವಕಪ್ ಗೆಲ್ಲಲಾಗದ ಹಿನ್ನೆಲೆಯಲ್ಲಿ ತಂಡದಲ್ಲಿ ಕೆಲ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೂ ಸಹ ಭಾರತ ತಂಡದಲ್ಲಿ ಬದಲಾವಣೆ ಆಗಿವೆ. ಯಾವಾಗಲೂ ಕೆಲಸದ ಹೊರೆ, ಕೆಲಸದ ಹೊರೆ ಎಂದು ಹೇಳಲಾಗುತ್ತದೆ. ಆದರೆ ಭಾರತ ತಂಡಕ್ಕಾಗಿ ಆಡುವಾಗ ಮಾತ್ರ ವರ್ಕ್ಲೋಡ್ ಆಗುತ್ತದೆಯೇ ಎಂದು ಗವಾಸ್ಕರ್ ಪ್ರಶ್ನಿಸಿದ್ದಾರೆ.
'ನೀವು ಪೂರ್ತಿ ಐಪಿಎಲ್ ಆಡುತ್ತೀರಿ, ಆ ಸಂದರ್ಭದಲ್ಲಿ ನಿರಂತರವಾಗಿ ಬೇರೆ ಬೇರೆ ಮೈದಾನಗಳಿಗೆ ಪ್ರಯಾಣ ಮಾಡುತ್ತೀರಿ. ಕೇವಲ ಹಿಂದಿನ ಸೀಸನ್ ಮಾತ್ರ ನಾಲ್ಕು ಸ್ಥಳಗಳಲ್ಲಷ್ಟೇ ನಡೆದಿತ್ತು. ಆಗ ವಾಹನದಲ್ಲಿ ಸಂಚರಿಸುವಾಗ ನಿಮಗೆ ಆಯಾಸವಾಗುವುದಿಲ್ಲ. ಆದರೆ ಭಾರತಕ್ಕಾಗಿ ಆಡುವಾಗ, ಗ್ಲಾಮರಸ್ ಅಲ್ಲದ ದೇಶಗಳಿಗೆ ಪ್ರವಾಸ ಮಾಡುವಾಗ ನಿಮಗೆ ಕೆಲಸದ ಹೊರೆ ಕಂಡುಬರುತ್ತದೆ ಎಂದು ಟೀಂ ಇಂಡಿಯಾ ಆಟಗಾರರ ಬಗ್ಗೆ ಸುನಿಲ್ ಗವಾಸ್ಕರ್ ವಾಗ್ದಾಳಿ ನಡೆಸಿದ್ದಾರೆ.