ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ವಿಶ್ವಕಪ್ 2023ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವು ಭಾರತವನ್ನು ಆರು ವಿಕೆಟ್‌ಗಳಿಂದ ಮಣಿಸಿತು. ಪಂದ್ಯ ಮುಗಿದ ತಕ್ಷಣ ಹಲವಾರು ಬಾಲಿವುಡ್ ತಾರೆಯರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಟೀಂ ಇಂಡಿಯಾದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ರೇಕ್ಷಕರ ನಡುವೆ ಕುಳಿತು ಆಟ ವೀಕ್ಷಿಸಿದ ಶಾರುಖ್ ಖಾನ್ ಕೂಡ ಎಕ್ಸ್ ಆ್ಯಪ್ನಲ್ಲಿ ಭಾರತ ತಂಡಕ್ಕೆ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ.
ಕ್ರಿಕೆಟ್‌ನಲ್ಲಿ ಇಡೀ ವಿಶ್ವವೇ ನಮ್ಮ ಕ್ರೀಡಾ ಪರಂಪರೆಯ ಬಗ್ಗೆ ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ಅವರು ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. 'ಭಾರತ ತಂಡ ಇಡೀ ಪಂದ್ಯಾವಳಿಯನ್ನು ಆಡಿದ ರೀತಿ ಗೌರವಯುತವಾಗಿದೆ. ಉತ್ತಮ ಉತ್ಸಾಹ ಮತ್ತು ದೃಢತೆಯನ್ನು ತೋರಿಸಿದ್ದೀರಿ. ಇದು ಕ್ರೀಡೆ, ಸೋಲು, ಗೆಲುವು ಇದ್ದೇ ಇರುತ್ತದೆ. ಯಾವಾಗಲೂ ಜೀವನದಲ್ಲಿ ಕೆಟ್ಟ ಮತ್ತು ಒಳ್ಳೆಯ ದಿನಗಳು ಇದ್ದೇ ಇರುತ್ತವೆ. ದುರದೃಷ್ಟವಶಾತ್, ಇಂದು ಸೋಲು ಸಂಭವಿಸಿದೆ. ಆದರೂ ನಮ್ಮ ಕ್ರೀಡಾ ಪರಂಪರೆಯ ಬಗ್ಗೆ ಹೆಮ್ಮೆ ತಂದಿದ್ದಕ್ಕಾಗಿ ಭಾರತದ ಕ್ರಿಕೆಟ್ ತಂಡಕ್ಕೆ ಧನ್ಯವಾದಗಳು. ನೀವು ಇಡೀ ಭಾರತಕ್ಕೆ ಮೆರುಗು ತಂದಿದ್ದೀರಿ. ಪ್ರೀತಿ ಮತ್ತು ಗೌರವದೊಂದಿಗೆ ನಮ್ಮ ದೇಶವನ್ನು ಒಂದು ಹೆಮ್ಮೆಯ ರಾಷ್ಟ್ರವನ್ನಾಗಿ ಮಾಡುತ್ತೀರಿ. 2023ರ ವಿಶ್ವಕಪ್‌ನಾದ್ಯಂತ ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಶ್ಲಾಘನೀಯ" ಎಂದು ತಿಳಿಸಿದ್ದಾರೆ.
ಪತ್ನಿ ಗೌರಿ ಮತ್ತು ಮಕ್ಕಳೊಂದಿಗೆ ಸ್ಟೇಡಿಯಂನಲ್ಲಿ ಹಾಜರಿದ್ದ ಶಾರುಖ್ ಖಾನ್, ಭಾರತ ತಂಡವನ್ನು ಹುರಿದುಂಬಿಸುತ್ತಿದ್ದರು. ಪಂದ್ಯದ ವೇಳೆ ಕಿಂಗ್ ಖಾನ್ ಟೀಂ ಇಂಡಿಯಾ ಪರ ಚಪ್ಪಾಳೆ ತಟ್ಟುತ್ತಿದ್ದುದು ಕಂಡುಬಂತು. ಈ ವೇಳೆ ಎಸ್ಆರ್ಕೆ ಬಿಳಿ ಟಿ-ಶರ್ಟ್ ಮತ್ತು ನೀಲಿ ಡೆನಿಮ್ ಪ್ಯಾಂಟ್ ಧರಿಸಿದ್ದರು.