ಹೈದರಾಬಾದ್: ಸಿಕ್ಸರ್ ಕಿಂಗ್, ಭಾರತ ಎರಡು ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರವಹಿಸಿದ ಆಲ್ರೌಂಡರ್ ಯುವರಾಜ್ ಸಿಂಗ್ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ನೀನು ಇಡೀ ವಿಶ್ವಕ್ಕೆ ಕಿಂಗ್ ಕೊಹ್ಲಿ. ಆದರೆ, ನನಗೆ ಎಂದಿಗೂ ನೀನು ಎಂದೆಂದಿಗೂ ಚೀಕೂ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಒಬ್ಬ ಅಭಿಮಾನಿಯಾಗಿ, ಕ್ರಿಕೆಟಿಗನಾಗಿ ಮತ್ತು ತಂಡದ ಸಹ ಆಟಗಾರನಾಗಿ ಕೊಹ್ಲಿಯ ಆರಂಭದಿಂದ ಲೆಜೆಂಡರಿ ಕ್ರಿಕೆಟಿಗನಾಗಿ ಬೆಳೆವಣಿಗೆಗೆ ಸಾಕ್ಷಿಯಾಗಿರುವ ಯುವರಾಜ್, ಸಾಮಾಜಿಕ ಜಾಲತಾಣದಲ್ಲಿ ಈ ಭಾವನಾತ್ಮಕ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.
"ಡೆಲ್ಲಿಯ ಪುಟ್ಟ ಹುಡುಗ ವಿರಾಟ್ ಕೊಹ್ಲಿಗೆ.. ನಾಯಕನಾಗಿ ವೃತ್ತಿಜೀವನವನ್ನು ಅಂತ್ಯಗೊಳಿಸುತ್ತಿರುವ ಈ ಸಂದರ್ಭದಲ್ಲಿ ವಿಶ್ವಾದ್ಯಂತ ಲಕ್ಷಾಂತರ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದ್ದಕ್ಕೆ, ಈ ವಿಶೇಷ ಶೂಗಳನ್ನು ನಾನು ನಿಮಗಾಗಿ ಅರ್ಪಿಸುತ್ತಿದ್ದೇನೆ.
ನೀವು ಹೇಗಿದ್ದೀರೋ ಹಾಗೆಯೇ ಇರುತ್ತೀರಿ, ನೀವು ನಿಮ್ಮ ರೀತಿಯಲ್ಲಿ ಆಟವಾಡಿ ಮತ್ತು ದೇಶವನ್ನು ಹೆಮ್ಮೆ ಪಡುವಂತೆ ಮಾಡುತ್ತೀರಿ ಎಂದು ನಾನು ಭಾವಿಸುತ್ತೇನೆ" ಎಂದು ಯುವರಾಜ್ ತಾವು ಹಂಚಿಕೊಂಡಿರುವ ಪತ್ರದ ಪೋಸ್ಟ್ ತಲೆಬರಹದಲ್ಲಿ ಬರೆದುಕೊಂಡಿದ್ದಾರೆ.
"ವಿರಾಟ್, ನೀವು ಒಬ್ಬ ಕ್ರಿಕೆಟಿಗನಾಗಿ ಮತ್ತು ವ್ಯಕ್ತಿಯಾಗಿ ಬೆಳೆಯುವುದನ್ನು ನಾನು ನೋಡಿದ್ದೇನೆ. ನೆಟ್ಸ್‌ನಲ್ಲಿ ಯುವಕನಾಗಿದ್ದ ಸಂದರ್ಭದಿಂದ ನೀವು ಭಾರತೀಯ ಕ್ರಿಕೆಟ್‌ನ ದಿಗ್ಗಜರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆದಿದ್ದೀರಿ. ಪ್ರಸ್ತುತ ನೀವು ಹೊಸ ಪೀಳಿಗೆಗೆ ದಾರಿ ಮಾಡಿಕೊಡುವ ದಂತಕಥೆಯಾಗಿದ್ದೀರಿ.
ನೆಟ್ಸ್‌ನಲ್ಲಿ ನಿಮ್ಮ ಶಿಸ್ತು, ಮೈದಾನದಲ್ಲಿನ ಉತ್ಸಾಹ ಮತ್ತು ಕ್ರೀಡೆಯಲ್ಲಿನ ಸಮರ್ಪಣೆ ದೇಶದ ಪ್ರತಿ ಮಗು ಕ್ರಿಕೆಟ್ ಬಗ್ಗೆ ಉತ್ಸಾಹ ಹೊಂದುವುದಕ್ಕೆ ಮತ್ತು ಮುಂದೊಂದು ದಿನ ಪ್ರತಿಯೊಬ್ಬರಲ್ಲೂ ನೀಲಿ ಜೆರ್ಸಿಯನ್ನು ತೊಡುವ ಕನಸಿಗೆ ಪ್ರೇರೇಪಣೆಯಾಗಿದೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನೀವು ಪ್ರತಿ ವರ್ಷವೂ ನಿಮ್ಮ ಕ್ರಿಕೆಟ್ ಆಟದ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದೀರಿ. ಈ ಸುಂದರ ಆಟದಲ್ಲಿ ನೀವು ಈಗಾಗಲೇ ಸಾಕಷ್ಟು ಸಾಧಿಸಿದ್ದೀರಿ. ನೀವೊಬ್ಬ ದಿಗ್ಗಜ ನಾಯಕ ಮತ್ತು ಅದ್ಭುತ ಲೀಡರ್. ನಿಮ್ಮೊಳಗೆ ಯಾವಾಗಲೂ ಉರಿಯುವ ಜ್ವಾಲೆ ಹಾಗೆಯೇ ಇರಲಿ, ನೀವೊಬ್ಬ ಸೂಪರ್‌ಸ್ಟಾರ್.
ನಿಮಗಾಗಿ ಈ ವಿಶೇಷ ಚಿನ್ನದ ಬೂಟ್. ದೇಶ ಹೆಮ್ಮೆ ಪಡುವಂತೆ ಮಾಡುವುದನ್ನು ಮುಂದುವರಿಸಿ ಎಂದು ಯುವರಾಜ್ ಸಿಂಗ್ ನಾಯಕತ್ವವನ್ನು ತ್ಯಜಿಸಿ ಆಟಗಾರನಾಗಿ ಭಾರತ ತಂಡದಲ್ಲಿ ಮುಂದುವರಿಯುತ್ತಿರುವ ಕೊಹ್ಲಿಗೆ ಹಾರೈಸಿದ್ದಾರೆ.
ಇದನ್ನೂ ಓದಿ:ವೃದ್ಧಿಮಾನ್ ಸಹಾಗೆ ಪತ್ರಕರ್ತನಿಂದ ಬೆದರಿಕೆ, ಹೆಸರು ಬಹಿರಂಗಪಡಿಸುವಂತೆ ಬಿಸಿಸಿಐ ಸೂಚನೆ